ಬೆಂಗಳೂರು, ಏ 9 (DaijiworldNews/MS): ಬ್ಯಾಂಕು, ಬಂದರು ಬಳಿಕ ನಂದಿನಿ ಮುಕ್ಕಲು ಹೊರಟಿದ್ದೀರಾ? ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದ್ದು, 99ಲಕ್ಷ ಲೀ. ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71ಲಕ್ಷ ಲೀ. ಸಂಗ್ರಹವಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿ ಕೆಎಂಎಫ್ ವಿರುದ್ಧ ಮಾಡಿರುವ ಷಡ್ಯಂತ್ರವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರುವುದು ಕನ್ನಡಿಗರಿಗೆ ಕೊಡುವುದಕ್ಕೋ, ಕಿತ್ತುಕೊಳ್ಳುವುದಕ್ಕೋ? ಕನ್ನಡಿಗರು ಕಟ್ಟಿದ್ದ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳನ್ನು ಮುಕ್ಕಿ ತಿಂದಾಯಿತು. ಈಗ ನಮ್ಮ ನಂದಿನಿಯನ್ನು ಮುಕ್ಕಲು ಹೊರಟಿದ್ದೀರಾ? ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್ ನದ್ದು, ಬಂದರು, ಏರ್ ಪೋರ್ಟ್ ನುಂಗಿದ ಅದಾನಿ ಗುಜರಾತ್ ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಗುಜರಾತ್ ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳೇ ಎಂದು ಪ್ರಶ್ನಿಸಿದ್ದಾರೆ
ನಾನು ಸಿಎಂ ಇದ್ದಾಗ ಜಾರಿಗೆ ತಂದಿದ್ದ ಕ್ಷೀರಭಾಗ್ಯ ಯೋಜನೆಗಳು ಅನ್ನಭಾಗ್ಯ ರೀತಿಯಲ್ಲಿಯೇ ನನಗೆ ಸಂತೃಪ್ತಿ ತಂದ ಯೋಜನೆಗಳು. ಗೋಭಕ್ತಿ ಎಂದರೆ ಗೋಮಾಂಸ ಮಾರಾಟಕ್ಕೆ ಲೈಸೆನ್ಸ್ ಕೊಡುವುದೇ ಮೋದಿ? ಈ ಗುಜರಾತಿ ಆಕ್ರಮಣ ಇನ್ನು ಸಹಿಸಲು ಸಾಧ್ಯ ಇಲ್ಲ. ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳ ಮಾರಾಟವನ್ನು ಗೌರವಪೂರ್ವಕವಾಗಿ ನಿಲ್ಲಿಸಿ. ಕನ್ನಡಿಗರ ನಾಡಪ್ರೇಮ, ಸ್ವಾಭಿಮಾನವನ್ನು ಕೆಣಕಲು ಹೋಗಬೇಡಿ. ಇಲ್ಲವಾದರೆ ಪರಿಣಾಮ ನೆಟ್ಟಗಾಗದು ಮೋದಿಜೀ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.