ಬೆಂಗಳೂರು, ಏ 9 (DaijiworldNews/MS): ಪ್ರವಾಹ ಬಂದು ರಾಜ್ಯದಲ್ಲಿ ರೈತರ ಬೆಳೆ ಸಹಿತ ಅಪಾರ ನಷ್ಟ ಉಂಟಾಗಿತ್ತು. ಆದರೆ ಪ್ರವಾಹ ಬಂದಾಗ ಬಾರದ ಪ್ರಧಾನಿ ನರೇಂದ್ರ ಮೋದಿ ಈಗ ಸಫಾರಿ ಸೂಟ್ ಹಾಕಿಕೊಂಡು ಬಂದಿದ್ದಾರೆ ಎಂದು ಪ್ರಧಾನಿ ಅವರ ರಾಜ್ಯ ಪ್ರವಾಸದ ಕುರಿತಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ,ರಾಜ್ಯದಲ್ಲಿ ಪ್ರವಾಹ ಬಂದು ಸಂಕಷ್ಟಕ್ಕೀಡಾಗದ ಪ್ರಧಾನಿ ಭೇಟಿ ನೀಡಲಿಲ್ಲ. ಇದೀಗ ಸಫಾರಿ ಸೂಟು ಹಾಕಿಕೊಂಡು ಬಂದಿದ್ದಾರೆ. ಮೋದಿ ಪ್ರವಾಸದ ಬಗ್ಗೆ ರಾಜ್ಯದ ಜನರು ನಿರ್ಧರಿಸುತ್ತಾರೆ. ವನ್ಯ ಜೀವಿಗಳಿಂದ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ನೆರವಾಗುವ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಸಫಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳಾದ ನೆನಪಿನಲ್ಲಿ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಲ್ಲಿಂದ ರಸ್ತೆ ಮುಖಾಂತರ ಬಂಡೀಪುರ ಕ್ಯಾಂಪ್ಗೆ ಆಗಮಿಸಸಿ ಅಭಯಾರಣ್ಯದಲ್ಲಿ 2 ಗಂಟೆಗಳ ಕಾಲ ಸುಮಾರು 20 ಕಿ.ಮೀ. ಸಂಚಾರ ನಡೆಸಿದ್ದಾರೆ.