ಉಡುಪಿ, ಏ 08 (DaijiworldNews/MS): ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ಕುರಿತು ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೂತನವಾಗಿ "ಫ್ಯಾಕ್ಟ್ ಚೆಕ್ ವಿಭಾಗ" ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಫೇಸ್ ಬುಕ್, ಯೂಟ್ಯೂಬ್ ,ಟ್ವಟರ್ ಸೇರಿ ವಿವಿಧ ಆನ್ ಲೈನ್ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಅವುಗಳ ಸತ್ಯಾಂಶ ಗಮನಿಸಲು ಹೊಸ ವಿಭಾಗ ಸ್ಥಾಪಿಸಲು ನಿರ್ಧರಿಸುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರಾದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು, ನಿಯಂತ್ರಿಸಲು ಕೇಂದ್ರ ಸರ್ಕಾರವು ಒಂದು ತಂಡವನ್ನು ರಚಿಸುತ್ತದೆ. ಸುದ್ದಿ ಸುಳ್ಳಾಗಿದ್ದರೆ ಅವುಗಳನ್ನು ತೆಗೆದು ಹಾಕುವಂತೆ ಜಾಲತಾಣದಗಳಿಗೆ ಸೂಚನೆ ನೀಡುವುದು ಈ ವಿಭಾಗದ ಪ್ರಮುಖ ಕಾರ್ಯ. ವಿಭಾಗದಲ್ಲಿ ಸಂಪೂರ್ಣವಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳು ಇರಲಿದ್ದಾರೆ. ಸುದ್ದಿಗಳನ್ನು ತೆಗೆಯಲು ಮೂರು ತಿಂಗಳ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕವೂ ನಕಲಿ ಸುದ್ದಿ ತೆಗೆಯದಿದ್ದರೆ ಐಟಿ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ.