ನವದೆಹಲಿ, ಏ 06 (DaijiworldNews/HR): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಪಕ್ಷಗಳ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದು, ಅದಾನಿ ಕುರಿತು ಜೆಪಿಸಿ ತನಿಖೆಗೆ ಎಲ್ಲಾ ವಿಪಕ್ಷಗಳು ಆಗ್ರಹಿಸಿದ್ದವು. ಆದರೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಗೌತಮ್ ಅದಾನಿ ಅವರ ಸಂಪತ್ತು ಎರಡುವರೆ ವರ್ಷದಲ್ಲಿ ಹೆಚ್ಚಾಗಿದೆ. ಕೇವಲ ಓರ್ವ ವ್ಯಾಪಾರಿಗೆ ಸರ್ಕಾರ ಎಲ್ಲಾ ಟೆಂಡರ್ ಗಳನ್ನು ನೀಡಿದೆ ಎಂದು ಆರೋಪಿಸಿದ್ದಾರೆ.
ಇನ್ನು ನರೇಂದ್ರ ಮೋದಿಯವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಸುಳ್ಳು ಭರವಸೆಯನ್ನು ನೀಡುತ್ತಿದ್ದಾರೆ. ಭಾಷಣದಿಂದ ಮಾತ್ರ ಯಾವುದೇ ಕೆಲಸ ಆಗುವುದಿಲ್ಲ. ಹೇಳಿದ್ದನ್ನು ಮಾಡಿ ತೋರಿಸಬೇಕು ಎಂದಿದ್ದಾರೆ.
ಓರ್ವ ಉದ್ಯಮಿಗೆ ಎಲ್ಲಾ ಟೆಂಡರ್ ಗಳನ್ನು ಕೊಡಲು ಕಾರಣವೇನು? ಜನರ ಹಣ ಓರ್ವ ಉದ್ಯಮಿಯ ಪಾಲಾಗುತ್ತಿದೆ. ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.