ಮಂಡ್ಯ, ಏ 06 (DaijiworldNews/HR): ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮಂಡ್ಯ ವಿಧಾನಸಭಾ ಕ್ಷೇತ್ರ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಅವರು ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ನೀಡಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಶಾಸಕ ಎಂ ಶ್ರೀನಿವಾಸ್ ಅವರು ರಾಜಕಾರಣಕ್ಕೆ ಬರುವ ಮೊದಲು ವಕೀಲರಾಗಿದ್ದು, ಬಳಿಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಅಲ್ಲಿಂದ ಮುಂದೆ ಆರು ಸಲ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆಗೊಂಡು ಆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಇನ್ನು ಮಂಡ್ಯ ತಾಲ್ಲೂಕು ಹನಕೆರೆ ಗ್ರಾಮದಲ್ಲಿ 1951ರಲ್ಲಿ ಎಂ. ಶ್ರೀನಿವಾಸ್ ಜನಿಸಿದ್ದು, ಶಾಲಾ ಶಿಕ್ಷಣದ ಬಳಿಕ ಪಿಯುಸಿ, ಬಿಎಸ್ಸಿ ಪದವಿಯನ್ನು ಮೈಸೂರಿನ ಎಂಡಿಟಿಡಿಬಿ ಕಾಲೇಜಿನಲ್ಲಿ ಮುಗಿಸಿದ ಶ್ರೀಯುತರು ಕಾನೂನು ಪದವಿಯನ್ನು ಮಂಡ್ಯದ ಹೊಂಬೇಗೌಡ ಕಾನೂನು ಕಾಲೇಜಿನಲ್ಲಿ ಪಡೆದು ವಕೀಲಿ ವೃತ್ತಿಯನ್ನು ಮಂಡ್ಯದಲ್ಲಿಯೇ ಪ್ರಾರಂಭಿಸಿದರು.
ಸಕ್ರಿಯವಾಗಿ ಜೆಡಿಎಸ್ ನಲ್ಲಿ ತೊಡಗಿಕೊಂಡಿದ್ದ ಅವರು, ಇದೀಗ ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ನೀಡಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.