ಬೆಂಗಳೂರು,ಏ 05 (DaijiworldNews/MS): ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಂತರದಲ್ಲಿ ರಾಜಕೀಯ ನೆಲೆಯನ್ನು ಒದಗಿಸಿದ್ದು ವರುಣಾ. ಆದರೆ ಇದೀಗ ಅವರನ್ನು ವರುಣದಲ್ಲೇ ಕಟ್ಟಿಹಾಕಲು ಮುಂದಾಗಿರುವ ಬಿಜೆಪಿ ವರಿಷ್ಠರು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ಮುಂದಾಗಿದ್ದಾರೆ.
"ನಾನು ವರುಣಾ ಕ್ಷೇತ್ರದ ಮಗ, ಇಲ್ಲಿಂದಲೇ ನನ್ನ ಕೊನೆ ಚುನಾವಣೆ" ಎಂದು ಘೋಷಿಸಿರುವ ಸಿದ್ದರಾಮಯ್ಯ, ತಮ್ಮ ಕೊನೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆದರೆ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ನಾಯಕನನ್ನು ಹಣಿಯಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಮೈಸೂರು ಜಿಲ್ಲೆಯಲ್ಲಿ ಪ್ರಭಾವವಿರುವ ಸೋಮಣ್ಣ, ಲಿಂಗಾಯತ ಮಠಗಳ ಜತೆ ಹತ್ತಿರದ ನಂಟು, ಈ ಕಾರಣಕ್ಕೆ, ವರುಣದಲ್ಲಿ ನಿಲ್ಲಿಸಿದರೆ ಪ್ರಬಲ ಎದುರಾಳಿಯನ್ನು ಕಣಕ್ಕೆ ಇಳಿಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.