ನವದೆಹಲಿ, ಏ 05 (DaijiworldNews/MS): ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಲೋಕಸಭಾ ಸದಸ್ಯದಿಂದ ಅನರ್ಹರಾಗಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಅವರಿಗೆ ಒದಗಿಸಲಾಗಿದ್ದ ವಾಸ ಸ್ಥಳವನ್ನು ಕೂಡಾ ಖಾಲಿ ಮಾಡಲು ಲೋಕಸಭೆ ಕಾರ್ಯಾಲಯ ತಿಳಿಸಿತ್ತು. ಹೀಗಾಗಿ ರಾಹುಲ್ ಮನೆ ಖಾಲಿ ಮಾಡಲಿದ್ದು, ಅಮ್ಮ ಸೋನಿಯಾ ಗಾಂಧಿಯವರ ಬಂಗಲೆಗೆ ಶಿಫ್ಟ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ರಾಹುಲ್ ಅವರ ಮನೆಯ ಪೀಠೋಪಕರಣಗಳು 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿಯವರ ನಿವಾಸಕ್ಕೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಲಾಗಿದೆಯಂತೆ. ಇದಲ್ಲದೆರಾಹುಲ್ ಕಚೇರಿಯ ಕೆಲಸಕ್ಕಾಗಿ ಮನೆಯೊಂದರ ಹುದುಕಾಟವು ನಡೆಯುತ್ತಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ಎರಡು ದಿನಗಳ ನಂತರ, ಲೋಕಸಭೆಯ ವಸತಿ ಸಮಿತಿಯು ಬಂಗಲೆಯನ್ನು ಖಾಲಿ ಮಾಡುವಂತೆ ಅವರಿಗೆ ನೋಟಿಸ್ ನೀಡಿತ್ತು.
ರಹುಲ್ ಗಾಂಧಿ, 12 ತುಘಲಕ್ ಲೇನ್ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದರು. 2004ರಲ್ಲಿ ಲೋಕಸಭೆ ಸಂಸದರಾಗಿ ಆಯ್ಕೆಯಾದ ಬಳಿಕ ಅವರಿಗೆ ಈ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು. ನಿಯಮಗಳ ಪ್ರಕಾರ, ಅವರು ಅನರ್ಹಗೊಳಿಸುವ ಆದೇಶದ ದಿನಾಂಕದಿಂದ (ಮಾರ್ಚ್ 24) ಒಂದು ತಿಂಗಳೊಳಗೆ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗಿತ್ತು. ಈ ನೋಟಿಸ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಂಗಲೆ ತೆರವು ಸೂಚನೆಯನ್ನು ಪಾಲಿಸುವುದಾಗಿ ಹೇಳಿದ್ದರು.