ಛತ್ತೀಸ್ಗಢ, ಏ 05 (DaijiworldNews/MS): ಛತ್ತೀಸ್ಗಢದ ಕಬೀರಧಾಮ್ ಜಿಲ್ಲೆಯಲ್ಲಿ ಮದುವೆಗೆ ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಸ್ಪೋಟಗೊಂಡು ನವ ವಿವಾಹಿತ ಹಾಗೂ ಆತನ ಸಹೋದರ ಸೇರಿ ಇಬ್ಬರು ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು ಈ ಸಂಬಂಧ ವಧುವಿನ ಮಾಜಿ ಪ್ರಿಯಕರನನ್ನು ಬಂಧಿಸಲಾಗಿದೆ.
ಘಟನೆಯಲ್ಲಿ ವರ ಹೇಮೇಂದ್ರ ಮೆರಾವಿ (22) ಹಾಗೂ ಸಹೋದರ ರಾಜ್ ಕುಮಾರ್(30) ಮೃತಪಟ್ಟಿದ್ದರು. ಆರೋಪಿಯನ್ನು ಸರಜೂ ಎಂದು ಗುರುತಿಸಲಾಗಿದೆ.
ಎಪ್ರಿಲ್ 1ರಂದು ಹೇಮೇಂದ್ರ ಮೆರಾವಿ ಅವರ ವಿವಾಹವಾಗಿದ್ದು ಮದುವೆಯ ಕಾರ್ಯಕ್ರಮಗಳು ಮುಗಿದ ಬಳಿಕ ಸೋಮವಾರದಂದು ಮನೆಮಂದಿ ಸೇರಿಕೊಂಡು ಮದುವೆಗೆ ಬಂದಿರುವ ಉಡುಗೊರೆಗಳನ್ನು ಪರಿಶೀಲಿಸುತ್ತಿದ್ದುರು. ಈ ವೇಳೆ ಹೋಮ್ ಥಿಯೇಟರ್ ಕೂಡಾ ಗಿಫ್ಟ್ ಆಗಿ ಬಂದಿತ್ತು. ಮದುಮಗ ಹಾಗೂ ಆತನ ಸಹೋದರ ಸೇರಿ ಹೋಮ್ ಥಿಯೇಟರ್ ನ ವಯರ್ ಸೆಟ್ ಮಾಡಿ ಪ್ಲಗ್ ಸ್ವಿಚ್ ಹಾಕಿದ ಕೂಡಲೆ ಹೋಮ್ ಥಿಯೇಟರ್ ಸ್ಪೋಟಗೊಂಡಿದೆ ಈ ವೇಳೆ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟರೆ ಸಹೋದರ ಸೇರಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹೋಮ್ ಥಿಯೇಟರ್ ಸಿಡಿದ ತೀವ್ರತೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎನ್ನಲಾಗಿದೆ.
ಹೋಮ್ ಥಿಯೇಟರ್ ನಲ್ಲಿ ಯಾರೋ ಸ್ಪೋಟಕ ಇಟ್ಟಿದ್ದರಿಂದಲೇ ಸ್ಪೋಟ ಸಂಭವಿಸಿದೆ ಎಂದು ಪೊಲೀಸರಿಗೆ ತಿಳಿದುಬಂದಿದ್ದು, ಹೀಗಾಗಿ ತನಿಖೆ ಕೈಗೊಂಡಿದ್ದು, ಈ ವೇಳೆ ಹೋಮ್ ಥಿಯೇಟರ್ ವಧುವಿನ ಮಾಜಿ ಪ್ರೇಮಿ ನೀಡಿದ್ದ ಎಂದು ತಿಳಿದುಬಂದಿದೆ. ಆರೋಪಿ ಮಾಜಿ ಪ್ರೇಯಸಿ ವಿವಾಹದಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಕಬಿರ್ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮನೀಶ್ ಠಾಕೂರ್ ಹೇಳಿದ್ದಾರೆ.