ನವದೆಹಲಿ, ಏ 04 (DaijiworldNews/HR): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ಎಲ್ಲ ಮಿತಿಗಳನ್ನು ಮೀರಿದ್ದಾರೆ ಮತ್ತು ಅವರನ್ನು ಪ್ರಜಾಪ್ರಭುತ್ವ ರಾಷ್ಟ್ರದಿಂದ ಗಂಟುಮೂಟೆ ಕಟ್ಟಿಸಿ ದೂರಕ್ಕೆ ಕಳುಹಿಸಬೇಕು" ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಕಾಂಗ್ರೆಸ್ ಮಾನಸಿಕವಾಗಿ ದಿವಾಳಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವ ಮೂಲಕ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳಂತಹ ವಿದೇಶಿ ಶಕ್ತಿಗಳನ್ನು ಪ್ರಚೋದನೆ ಮಾಡಿದ್ದಾರೆ" ಎಂದು ನಡ್ಡಾ ಆರೋಪಿಸಿದ್ದಾರೆ.
ಇನ್ನು "ರಾಹುಲ್ ಗಾಂಧಿ ಅವರು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ನಾಚಿಕೆಗೇಡಿನ ಹೇಳಿಕೆಗಳ ಮೂಲಕ ಕೇವಲ ರಾಷ್ಟ್ರವನ್ನು ಅವಮಾನಿಸಿಲ್ಲ. ಬದಲಿಗೆ ನಮ್ಮ ದೇಶದಲ್ಲಿ ಮಧ್ಯಪ್ರವೇಶಿಸುವಂತೆ ವಿದೇಶಿ ರಾಷ್ಟ್ರಗಳನ್ನು ಆಹ್ವಾನಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಬ್ರಿಟನ್ನಲ್ಲಿ ನೀಡಿರುವ ಹೇಳಿಕೆಗೆ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿಯ ಸದಸ್ಯರು ಪಟ್ಟುಹಿಡಿದಿದ್ದರೆ, ಕಾಂಗ್ರೆಸ್, ಬಿಜೆಪಿಯ ಆರೋಪವನ್ನು ತಿರಸ್ಕರಿಸಿದೆ.
ರಾಹುಲ್ ಗಾಂಧಿ ಅವರು ಭಾರತೀಯ ಪ್ರಜಾಪ್ರಭುತ್ವದ ರಚನೆಗಳು ದಾಳಿಗೆ ಒಳಗಾಗಿವೆ ಮತ್ತು ದೇಶದ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆಯುತ್ತಿದೆ ಎಂದು ಬ್ರಿಟನ್ನಲ್ಲಿ ಆರೋಪಿಸಿದ್ದರು.