ಮೈಸೂರು, ಏ 02 (DaijiworldNews/HR): ಚುನಾವಣೆಯಲ್ಲಿ ನನ್ನ ಎದುರಾಳಿ ಯಾರೆಂಬ ಬಗ್ಗೆ ಯೋಚನೆ ಮಾಡಲು ಹೋಗಲ್ಲ, ಯಾರು ನಮ್ಮ ಶಾಸಕರಾಗಬೇಕು ಎಂದು ತೀರ್ಮಾನ ಮಾಡುವುದು ಜನ. ಜನರ ಆಶೀರ್ವಾದ ಮುಖ್ಯವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಟಿಕೆಟ್ ವಿಚಾರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಟಿಕೇಟ್ ವಿಚಾರ ನಾಡಿದ್ದು ಇತ್ಯರ್ಥವಾಗಬಹುದು. ನಾಡಿದ್ದು ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ, ಅಂದು ಇತ್ಯರ್ಥವಾಗಬಹುದು ಎಂದರು.
ಇನ್ನು ಯಾರನ್ನು ಯಾರಿಂದಲೂ ಕಟ್ಟಿಹಾಕಲು ಆಗಲ್ಲ. ಒಬ್ಬರನ್ನು ಸೋಲಿಸುವುದು ಗೆಲ್ಲಿಸುವುದು ಜನರ ಕೈಲಿದೆ. ನಾನು ನಾಮಪತ್ರ ಸಲ್ಲಿಕೆಗೆ ಮಾತ್ರ ವರುಣಾಗೆ ಹೋಗುತ್ತೇನೆ. ಯತೀಂದ್ರ ಅವರು ಅಲ್ಲಿನ ಹಾಲಿ ಶಾಸಕರು, ಅವರು ಕೂಡ ಅಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಸರ್ಕಾರ ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಮಾಡಿದೆ. ಅವರ ಉದ್ದೇಶ ಒಳ್ಳೆಯದಿಲ್ಲ. ಮೀಸಲಾತಿ ಕೊಡಬೇಕು ಎಂದಿದ್ದರೆ ಅದರ ಬಗ್ಗೆ ಅಧ್ಯಯನ ಮಾಡಿ ಸಂವಿಧಾನಬದ್ಧವಾಗಿ, ವೈಜ್ಞಾನಿಕವಾಗಿ ನೀಡುತ್ತಿದ್ದರು. ಒಳಮೀಸಲಾತಿ ವಿಚಾರವಾಗಿ ಸರ್ಕಾರ 4 ವರ್ಷದಿಂದ ಸುಮ್ಮನಿದ್ದು ಚುನಾವಣೆ ಬಂದಾಗ ಓಟಿಗಾಗಿ ಕೊನೆ ಘಳಿಗೆಯಲ್ಲಿ ಜಾರಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.