ಭೋಪಾಲ್, ಏ 02 (DaijiworldNews/HR): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಚೀತಾವೊಂದು ದಾರಿತಪ್ಪಿ ಸಮೀಪವಿರುವ ಹಳ್ಳಿಯೊಂದಕ್ಕೆ ಹೊಂದಿಕೊಂಡಿರುವ ಹೊಲದಲ್ಲಿ ಕಾಣಿಸಿಕೊಂಡಿದೆ.
ಸೆಪ್ಟೆಂಬರ್ನಲ್ಲಿ ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳಲ್ಲಿ ಒಂದಾದ ಒಬಾನ್, ಕಳೆದ ತಿಂಗಳು ಬಿಡುಗಡೆಯಾದ ಪಾರ್ಕ್ನ ಮುಕ್ತ ವ್ಯಾಪ್ತಿಯ ಪ್ರದೇಶದಿಂದ ಸುಮಾರು 15-20 ಕಿಲೋಮೀಟರ್ ದೂರದಲ್ಲಿರುವ ಹೊಲಕ್ಕೆ ದಾರಿ ತಪ್ಪಿ ಪ್ರವೇಶಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಿಯೋಪುರ್ ವಿಭಾಗೀಯ ಅರಣ್ಯ ಅಧಿಕಾರಿ ಪಿ.ಕೆ. ವರ್ಮಾ, ಕಾಲರ್ ಡಿವೈಸ್ ಸಾಧನದಿಂದ ಬಂದ ಸಿಗ್ನಲ್ಗಳ ಪ್ರಕಾರ, ಚೀತಾ ಶನಿವಾರ ರಾತ್ರಿಯಿಂದ ಹಳ್ಳಿಯ ಕಡೆಗೆ ಚಲಿಸುತ್ತಿದೆ. ಪೊಲೀಸ್ ತಂಡವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು ಗ್ರಾಮಸ್ಥರನ್ನು ದೂರವಿಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬಂದಿ ಅದನ್ನು ಉದ್ಯಾನದ ಪ್ರದೇಶಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸುತ್ತಿದ್ದಾರೆ.
ಇನ್ನು ಅರಣ್ಯದ ಆವರಣಕ್ಕೆ ಮರಳಲು ಸಿಬಂದಿ ಓಬನ್ನನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.