ಜಾರ್ಖಂಡ್, ಏ 02 (DaijiworldNews/HR): ಆಸ್ತಿ ವಿವಾದ ಮತ್ತು ವಿಮೆ ಹಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಅತ್ತಿಗೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ಜಾರ್ಖಂಡ್ನ ಗುಮ್ಲಾ ನಗರದಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿದ್ದ ಅನೋಸ್ ಕಂದುಲ್ನಾ ಎಂಬಾತ ತನ್ನ ಅತ್ತಿಗೆ ಪೂನಂ ಕಂದುಲ್ನಾ (35) ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಪೂನಂ ಅವರ ಇಬ್ಬರು ಚಿಕ್ಕ ಮಕ್ಕಳು ತಮ್ಮ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ ಅವರ ಮೇಲೂ ಆತ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ.
ಇನ್ನು 2017ರಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಪೂನಂ ತನ್ನ ಇಬ್ಬರು ಪುತ್ರರಾದ ಪವನ್ ಮತ್ತು ಅರ್ಪಿತ್ ಮತ್ತು ಸೋದರ ಮಾವ ವಿಶ್ರಮ್ ಅವರೊಂದಿಗೆ ಲುಂಗಾಟು ಪದ್ರಾ ಟೋಲಿ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಆರೋಪಿಯು ಪೂನಂ ಮತ್ತು ಆಕೆಯ ಇಬ್ಬರು ಪುತ್ರರನ್ನು ಕೊಲೆ ಮಾಡಿ ಬಳಿಕ ಮೂರು ಮೃತದೇಹಗಳನ್ನು ಮನೆಯಿಂದ ಸುಮಾರು 100 ಮೀಟರ್ ದೂರದ ಹೊಲದಲ್ಲಿ ಹೂತು ಹಾಕಿದ್ದಾನೆ. ಕುಟುಂಬವು ಹಲವಾರು ದಿನಗಳಿಂದ ನಾಪತ್ತೆಯಾಗಿರುವುದನ್ನು ಕಂಡು, ಪೂನಂ ಅವರ ಸೋದರ ಮಾವ ವಿಶ್ರಮ್ ಕಂದುಲಾನ ಅವರು ಕಾಣೆಯಾದ ಕುಟುಂಬದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ಇನ್ನು ತನಿಖೆಯ ವೇಳೆ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.