ಬೆಂಗಳೂರು, ಏ 02 (DaijiworldNews/MS): ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಏ. 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ.
ಲೋಕಾಯುಕ್ತ ಪೊಲೀಸ್ ಕಸ್ಟಡಿ ಶನಿವಾರ ಅಂತ್ಯಗೊಂಡ ಹಿನ್ನೆಲೆ ಮಾಡಾಳ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಗುತ್ತಿಗೆದಾರನಿಂದ ಲಂಚ ಪಡೆದ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ ಲೋಕಾಯುಕ್ತ ಪೊಲೀಸರು ಮಾಡಾಳ್ ಅವರನ್ನು ಬಂಧಿಸಿದ್ದರು. ನಂತರ ಅವರನ್ನು 5 ದಿನ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿತ್ತು.
ಲೋಕಾಯುಕ್ತ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನಲೆ, ಜನಪ್ರತಿನಿಧಿಗಳ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ೧೪ ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶಿಸಿತು. ಹೀಗಾಗಿ ಪೊಲೀಸರು ಶಾಸಕರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದುದ್ದಾರೆ. ಕಾರಾಗೃಹದಲ್ಲಿ ವಿಶೇಷ ಗಣ್ಯ ವ್ಯಕ್ತಿಗಳ ಬ್ಯಾರಕ್ ನ ಸೆಲ್ ನಲ್ಲಿ ಮಾಡಳು ಅವರನ್ನು ಇರಿಸಲಾಗಿದೆ.
ಇನ್ನು ಏಪ್ರಿಲ್ 6ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿರುವ ಕೋರ್ಟ್, ಅಂದು ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ. ಮಾಡಾಳ್ಗೆ ಮನೆ ಊಟ ನೀಡಲು ಅವಕಾಶ ಕೊಡಬೇಕು ಎಂದು ವಕೀಲರು ಮನವಿ ಮಾಡಿದ್ದರು. ಇದಕ್ಕೆ ಅನುಮತಿ ನೀಡದ ಕೋರ್ಟ್ ಜೈಲಿನ ಊಟವನ್ನೇ ನೀಡುವಂತೆ ಸೂಚಿಸಿದೆ. ಅನಾರೋಗ್ಯ ಸಮಸ್ಯೆ ಬಂದರೆ, ಜೈಲಿನಲ್ಲೇ ಆಸ್ಪತ್ರೆ ಇದೆ ಎಂದೂ ತಿಳಿಸಿದೆ.