ಪಂಜಾಬ್, ಏ 01 (DaijiworldNews/MS): 34 ವರ್ಷಗಳ ಹಿಂದಿನ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಿಂದ ಒಂದು ವರ್ಷ ಸಜೆಗೆ ಗುರಿಯಾಗಿರುವ ಪಂಜಾಬ್ ಕಾಂಗ್ರೆಸ್ ನಾಯಕ,ಮಾಜಿ ಕ್ರಿಕೆಟಿಗನವಜೋತ್ ಸಿಂಗ್ ಸಿಧು ಇಂದು ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಸಿಧು ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆಯ ವಿವರ ನೀಡಲಾಗಿದೆ. "ಸರ್ದಾರ್ ನವಜೋತ್ ಸಿಂಗ್ ಸಿಧು ಅವರು ನಾಳೆ ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಎಲ್ಲರಿಗೂ ಮಾಹಿತಿ ನೀಡುತ್ತೇವೆ" ಎಂದು ಸಿಧು ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಸಿಧುಗೆ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಹಿನ್ನೆಲೆ ಕಳೆದ ಮೇ 20ರಂದು ಪಾಟಿಯಾಲ ಕೋರ್ಟ್ಗೆ ಶರಣಾಗಿದ್ದರು. ಜೈಲಿಗೆ ಹೋದ ಬಳಿಕ ಸಿಧು ಒಮ್ಮೆಯೂ ಪೇರೋಲ್ ಪಡೆದುಕೊಂಡು ಹೊರಗೆ ಬಂದಿರಲಿಲ್ಲ. ಹೀಗಾಗಿ ಸಿಧು ಈಗ ಜೈಲಿನಿಂದ ಬಿಡುಗಡೆಯಾಗುತ್ತಿರುವುದು ಕುಟುಂಬಸ್ಥರಲ್ಲಿ ಸಂತಸವುಂಟು ಮಾಡಿದೆ.
27 ಡಿಸೆಂಬರ್ 1988 ರಂದು ಪಂಜಾಬ್ ಪಟಿಯಾಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಿಧು, 65 ವರ್ಷದ ವೃದ್ಧನ ಸಾವಿಗೆ ಕಾರಣರಾಗಿದ್ದರು. ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್, ಸಿದುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.