ನವದೆಹಲಿ, ಮಾ 31 (DaijiworldNews/DB): ಅಬಕಾರಿ ನೀತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿಂದಂತೆ ಬಂಧಿತರಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಮಾರ್ಚ್ 24ರಂದು ಜಾಮೀನು ಅರ್ಜಿ ಕುರಿತ ಆದೇಶವನ್ನು ರೋಸ್ ಅವೆನ್ಯೂ ನ್ಯಾಯಾಲಯದ ಸಿಬಿಐ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಕಾಯ್ದಿರಿಸಿದ್ದರು. ಅದಕ್ಕೂ ಮೊದಲು ಮಾರ್ಚ್ 20ರಂದು ಸಿಸೋಡಿಯಾ ಅವರನ್ನು ಏಪ್ರಿಲ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಸಿಸೋಡಿಯಾ ಪರ ವಾದ ಮಂಡಿಸಿದ ಸಿಸೋಡಿಯಾ ಪರ ವಕೀಲರು, ಸಿಬಿಐ ತನಿಖೆಗೆ ಸಿಸೋಡಿಯಾ ಸಹಕರಿಸುತ್ತಿದ್ದು, ಅವರ ವಿರುದ್ದ ಸಿಬಿಐ ನಡೆಸಿದ ಹುಡುಕಾಟಗಳಿಂದ ಯಾವುದೇ ದೋಷಾರೋಪಣೆ ಮಾಡಿಲ್ಲ. ಈ ಪ್ರಕರಣದಲ್ಲಿ ಇಬ್ಬರು ಸಾರ್ವಜನಿಕ ಸೇವಕರ ಮೇಲೆ ಗಂಭೀರ ಆರೋಪಗಳಿದ್ದರೂ, ಬಂಧಿಸಿಲ್ಲ. ಆದರೆ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಅವರಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು.
ಇನ್ನ ಸಿಬಿಐ ಪರ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ಪಿ. ಸಿಂಗ್, ಮೊಬೈಲ್, ಫೈಲ್ ಸಹಿತ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ. ಇದೊಂದು ನಿರಂತರ ಅಭ್ಯಾಸವಾಗಿದೆ ಎಂದರು. ಅಲ್ಲದೆ ಜಾಮೀನು ಅರ್ಜಿಯನ್ನು ಸಿಬಿಐ ವಿರೋಧಿಸಿತು.
2021-22ರ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಸಿಬಿಐ ಬಂಧಿಸಿತ್ತು. ಬಳಿಕ ಮಾರ್ಚ್ 9ರಂದು ತಿಹಾರ್ ಜೈಲಿನಲ್ಲಿ ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿತ್ತು.