ಬೆಂಗಳೂರು, ಮಾ 31 (DaijiworldNews/DB): ಪ್ರಧಾನಿ ಮೋದಿ ಟೂರ್ಗೆ ಕರ್ನಾಟಕದಲ್ಲಿ 40 ಪರ್ಸೆಂಟ್ ಅಲ್ಲ, 200 ಪರ್ಸೆಂಟ್ ಡೀಲ್ ನಡೆಯುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇಲ್ಲಿನ ತಕ್ಕಡಿ ಮೇಲೇಳಿಸಬೇಕೆಂದು ಪ್ರಧಾನಿ ಹೊರಟರೆ ಬಸವರಾಜ ಬೊಮ್ಮಾಯಿ ಸರ್ಕಾರ ಡೀಲ್ ಕುದುರಿಸುವುದರಲ್ಲಿ ತೊಡಗಿದೆ ಎಂದರು.
ಕೆಂಪೇಗೌಡರ ಪ್ರತಿಮೆಯನ್ನು ಗೌರವದಿಂದ ನಿರ್ಮಾಣ ಮಾಡಿದ್ದಾರೆಂದೇ ನಾವೆಲ್ಲಾ ಭಾವಿಸಿದ್ದೆವು. ಆದರೆ ಇದರಲ್ಲಿ 200 ಪರ್ಸೆಂಟ್ ಡೀಲ್ ನಡೆದಿದೆ. ಉದ್ಘಾಟನೆಗೇ 30 ಕೋಟಿ ಖರ್ಚಾಗಿದೆ. ಏಳು ಬಾರಿ ಮೋದಿ ಬಂದು ಹೋಗಿದ್ದಾರೆಂದರೆ ಎಷ್ಟು ಹಣ ಲೂಟಿಯಾಗಿದೆ ಎಂಬುದನ್ನು ಗಮನಿಸಿ ಎಂದು ಡಿ.ಕೆ. ಸುರೇಶ್ ಹೇಳಿದರು.
ಮೋದಿ, ಅಮಿತ್ ಶಾ ಬಂದಲ್ಲೆಲ್ಲ ಅವರ ಹೆಸರಲ್ಲಿ ಇವರು ಎಷ್ಟು ಹಣ ಲೂಟಿ ಮಾಡಿದ್ದಾರೆಂದು ಗೊತ್ತಿಲ್ಲ. ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮಾಡಿರುವ ಬಿಲ್ ಎಷ್ಟು? ಎಂದು ಪ್ರಶ್ನಿಸಿದ ಅವರು, ಹಣ ಲೂಟಿ ಮಾಡುವುದಕ್ಕಾಗಿಯೇ ಹೋದಲೆಲ್ಲಾ ಪ್ರತಿಮೆ ನಿರ್ಮಾಣದ ಭರವಸೆ ನೀಡುತ್ತಾರೆ ಎಂದು ಕಿಡಿ ಕಾರಿದರು.
ನಾನು ಯಾವುದಕ್ಕೂ ಹೆದರುವುದಿಲ್ಲ. ಭಯ ಎಂಬುದು ನನ್ನ ಜಾಯಮಾನದಲ್ಲಿಯೇ ಇಲ್ಲ. ಒಂದು ವೇಳೆ ನನಗೆ ಭಯ ಇದೆ ಎಂದು ಯಾರಾದರು ತಿಳಿದುಕೊಂಡರೆ ಅವನಷ್ಟು ಮುಠಾಳ ಇನ್ಯಾರಿಲ್ಲ ಎಂದರು.
ಮುನಿರತ್ನ ಅವರನ್ನು ಒಕ್ಕಲಿಗ ಕನ್ನಡತಿ ವಿರುದ್ದ ತಮಿಳರನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರೆಲ್ಲ ಹಣ, ರಾಜಕಾರಣ ಮಾಡುವುದಕ್ಕೆ ಬಂದಿದ್ದಾರೆಯೇ ಹೊರತು ಜನರ ಉದ್ದಾರಕ್ಕಲ್ಲ. ಈಗಾಗಲೇ ಸಚಿವರ ವಿರುದ್ದ ಕುಸುಮಾ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮುನಿರತ್ನ ಅವರು ಭಾಷಾ ಸಾಮರಸ್ಯ ಕದಡುವ ಕೆಲಸ ಮಾಡಿದ್ದಾರೆ. ತತ್ಕ್ಷಣ ಅವರನ್ನು ಪೊಲೀಸರು ಬಂಧಿಸಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.