ವಿಜಯಪುರ, ಮಾ 31 (DaijiworldNews/DB): ರಾಜಕಾರಣಿಗಳು ನೀಡಿದ ಉಚಿತ ಕೊಡುಗೆಗಳನ್ನು ಸ್ವೀಕರಿಸುವ ಮೂಲಕ ರಾಜಕಾರಣಿಗಳನ್ನು ಮತದಾರರೇ ಭ್ರಷ್ಟಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಕಿಡಿ ಕಾರಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜಕಾರಣಿಗಳಿಂದ ಉಚಿತ ಕೊಡುಗೆ ಸ್ವೀಕರಿಸುವುದು, ಅವರಿಂದ ಅದಕ್ಕಾಗಿ ಬೇಡಿಕೆ ಇಡುವುದು ಸರಿಯಾದ ಕ್ರಮವಲ್ಲ. ಇದು ಮತದಾರರೇ ರಾಜಕಾರಣಿಗಳನ್ನು ಭ್ರಷ್ಟರಾಗಿಸಿದಂತೆ. ಕೆಲವರು ಇಡೀ ಜೀವನವೇ ಉಚಿತ ಕೊಡುಗೆಗಳ ಮೇಲೆ ಅಲಂಬಿತವಾಗಿರುವಂತೆ ವರ್ತನೆ ತೋರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಿವರೆಹೆ ಜನ ಉಚಿತ ಕೊಡುಗೆ ಪಡೆಯುತ್ತಾರೋ ಅಲ್ಲಿವರೆಗೆ ಈ ಕೆಟ್ಟ ಸಂಸ್ಕೃತಿ ಮುಂದುವರಿಯುತ್ತಲೇ ಇರುತ್ತದೆ. ಮತದಾರರು ರಾಜಕಾರಣಿಗಳಿಂದ ಉಚಿತ ಉಡುಗೊರೆಗಳನ್ನು ಪಡೆದರೆ ನಾಳೆ ಆಯ್ಕೆಯಾದ ಜನಪ್ರತಿನಿಧಿಯೂ ಮತದಾರ ಸುಮ್ಮನೇ ಮತ ಹಾಕಿಲ್ಲ, ಉಡುಗೊರೆ ಪಡೆದುಕೊಂಡಿದ್ದಾನೆ ಎಂದೇ ಹೇಳುತ್ತಾನೆ. ಇಂತಹ ಉಡುಗೊರೆ, ಆಮಿಷಗಳನ್ನು ತಿರಸ್ಕರಿಸಿದರೆ ಚುನಾವಣೆ ಪಾರದರ್ಶಕವಾಗಿರಲು ಸಾಧ್ಯ ಎಂದರು.
ಜನರಿಗಾಗಿ ಕೆಲಸ ಮಾಡುವವರಿಗೆ ಮತ ಹಾಕ ಬೇಕೇ ಹೊರತು ಉಚಿತಗಳನ್ನು ನೀಡಿ ಗೆದ್ದ ಬಳಿಕ ಜನರನ್ನು ಬಿಟ್ಟು ಹಣ ಮಾಡುವ ಕಡೆಗೆ ಯೋಚಿಸುವವರಿಗೆ ಮತ ಹಾಕಬೇಡಿ. ರಾಜಧಾನಿಯಲ್ಲಿ ಕುಳಿತುಕೊಳ್ಳುವವರಿಗೆ ಎಂದಿಗೂ ಮತದಾನ ಮಾಡದಿರಿ ಎಂದು ಹೊರಟ್ಟಿ ಸಲಹೆ ನೀಡಿದರು.