ಕೋಲ್ಕತ್ತ, ಮಾ 31 (DaijiworldNews/DB): ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಆಚರಣೆ ವೇಳೆ ಉಂಟಾಗಿದ್ದ ಘರ್ಷಣೆಯ ಹಿಂದೆ ಬಿಜೆಪಿಯ ಕುತಂತ್ರ ಇದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, ಜನರು ಯಾವುದೇ ಘರ್ಷಣೆಗೆ ಮುಂದಾಗಬಾರದು. ಸ್ಥಳದಲ್ಲಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೌರಾದಲ್ಲಿ ನಡೆದ ಘಟನೆ ಹೇಯವಾಗಿದೆ. ಹಿಂದೂ, ಮುಸ್ಲಿಮರು ಈ ಘರ್ಷಣೆಯ ಹಿಂದಿಲ್ಲ. ಇದರ ಹಿಂದೆ ಬಿಜೆಪಿ, ಬಜರಂಗದಳ ಮತ್ತು ಇತರ ಇಂತಹ ಸಂಘಟನೆಗಳಿವೆ. ಅವರೆಲ್ಲರೂ ಶಸ್ತ್ರಾಸ್ತ್ರಗಳ ಸಹಿತ ಘರ್ಷಣೆಗೆ ಕಾರಣರಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಘರ್ಷಣೆಯಿಂದ ಹಲವರು ತಮ್ಮ ಆಸ್ತಿ ಕಳೆದುಕೊಂಡಿದ್ದಾರೆ. ಅಂತಹವರಿಗೆ ಸರ್ಕಾರ ನೆರವು ನೀಡಲಿದೆ ಎಂದವರು ಭರವಸೆ ನೀಡಿದ್ದಾರೆ.
ಘಟನೆ ಸಂಬಂಧ ಈಗಾಗಲೇ 31 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.