ಅಮರಾವತಿ, ಮಾ 31 (DaijiworldNews/DB): ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ವಿರುದ್ದ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪಾಂಡೂರಿ ಕೋಟಿರತ್ನಂ ಅಂಜನ್ (34) ಬಂಧಿತ ಆರೋಪಿ. ಈತ ಟಿಡಿಪಿ ಪರವಾಗಿ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ. ಅಲ್ಲದೆ ವೈಎಸ್ಆರ್ಸಿಪಿ ನಾಯಕರ ವಿರುದ್ದ ಪೋಸ್ಟ್ ಹಾಕುತ್ತಿದ್ದ ಎಂದು ಪೊಲೀಸರಿಗೆ ಆಡಳಿತ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಕೋಟಿರತ್ನಂ ಅಂಜನ್ನನ್ನು ಬಂಧಿಸಿದ್ದು, ಆತನ ವಿರುದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತನ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈತ ಅಮೆರಿಕಾದಲ್ಲಿ ಎಂಎಸ್ ಮಾಡಿ ಮೂರು ವರ್ಷ ಅಲ್ಲಿ ಉದ್ಯೋಗಿಯಾಗಿದ್ದ. ಬಳಿಕ 2015ರಲ್ಲಿ ಭಾರತಕ್ಕೆ ಹಿಂತಿರುಗಿದ್ದ. ಅಂಜನ್ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಆತ ಪೋಸ್ಟ್ ಮಾಡುವುದಕ್ಕೆ ಯಾರಾದರೂ ಒತ್ತಾಯ ಹೇರಿದ್ದರೇ ಎಂದು ಪ್ರಶ್ನಿಸಿದ್ದಾರೆ. ಆದರೆ ತಾನೇ ಪೋಸ್ಟ್ ಮಾಡುತ್ತಿದ್ದೆ ಎಂಬುದಾಗಿ ಆತ ಪೊಲೀಸರೆದುರು ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.