ಕಾನ್ಪುರ, ಮಾ 31 (DaijiworldNews/DB): ಬಹುಮಹಣಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 500 ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಬಾಂಸ್ಮಂಡಿ ಪ್ರದೇಶದ ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಒಂದು ಅಂಗಡಿಯಲ್ಲಿ ಸಂಭವಿಸಿದ ಅನಾಹುತ ಪಕ್ಕದ ಎಲ್ಲಾ ಅಂಗಡಿಗಳಿಗೆ ವ್ಯಾಪಿಸಿದ್ದು, ಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ. 100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಧೂಳಿನಿಂದ ಕೂಡಿದ ಬಿರುಗಾಳಿ ಈ ಪ್ರದೇಶದಲ್ಲಿ ಉಂಟಾಗಿದ್ದು, ಇದಾದ ನಂತರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಆನಂದ್ ಪ್ರಕಾಶ್ ತಿವಾರಿ ತಿಳಿಸಿದ್ದಾರೆ.