ರಾಯಚೂರು, ಮಾ 31 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ವಿರುದ್ದವೇ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಶಾಸಕನದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಮೋದಿನೂ ಇಲ್ಲ, ಪಾದಿನೂ ಇಲ್ಲ, ನಾನು ಸಿಂಗಲ್ ಮ್ಯಾನ್ ಎಂದೆಲ್ಲಾ ಮಾತನಾಡಿರುವ ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ಇದಾಗಿದ್ದು, ಈ ಆಡಿಯೋ ಸದ್ಯ ವೈರಲ್ ಆಗಿದೆ. ಕಾರ್ಯಕ್ರಮವೊಂದರ ಸಲುವಾಗಿ ಫೋನ್ನಲ್ಲಿ ಮಾತನಾಡಿದ ಆಡಿಯೋ ಇದಾಗಿದೆ. ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಕಾಲ ಮಾತುಕತೆ ನಡೆಸಲಾಗಿದೆ. ಮೋದಿ ಮಾತ್ರವಲ್ಲದೆ ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಸಚಿವ ಶ್ರೀರಾಮುಲು ವಿರುದ್ದವೂ ಕೇವಲವಾಗಿ ಮಾತನಾಡಲಾಗಿರುವುದು ಆಡಿಯೋದಲ್ಲಿದೆ ಎಂದು ವರದಿಯಾಗಿದೆ.
ಯಾವ ಮೋದಿಯಿಲ್ಲ, ಪಾದಿಯಿಲ್ಲ. ನಾನೊಬ್ಬನೇ ಶಿವರಾಜ್ ಪಾಟೀಲ್. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ. ಮೋದಿ ರೈಟ್ ಹ್ಯಾಂಡ್ಗೆ ನಾನು ಕೇಳಲ್ಲ. ಸಿಂಗಲ್ ಆರ್ಮಿ ನಾನು. ನನಗೆ ರೈಟ್, ಲೆಫ್ಟ್ ಎಂದೆಲ್ಲ ಇಲ್ಲ. ನನ್ನ ಕೈ, ನನ್ನ ಕಾಲು ನಾನೇ ಮೋದಿ, ನಾನೇ ಟ್ರಂಪ್..ಯಾವನ ಬದನೆಕಾಯಿ ಮಾತು ಸಹ ನಾನು ಕೇಳಲ್ಲ ಎಂದು ಆಡಿಯೋದಲ್ಲಿ ಮಾತನಾಡಲಾಗಿದೆ.
ಅಲ್ಲದೆ ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ಗಳಿಗೆ ಬಾ ಅಂತೀನಾ? ಎಲೆಕ್ಷನ್ನಲ್ಲಿ ಸೋತರೂ, ಗೆದ್ರೂ ಚಿಂತೆಯಿಲ್ಲ ಮಲಗಿದ್ರೂ ಚಿಂತೆಯಿಲ್ಲ. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಎಂದರೆ ಅದು ಶಿವರಾಜ್ ಪಾಟೀಲ್. ನಾನು ದೇವರಿದ್ದಂಗ, ಅದಕ್ಕೇ ನಮ್ಮ ಹುಡುಗರಿಗೆ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ದಿನಾಲೂ ಕೇಳಿತೀನಿ ಎಂದೆಲ್ಲಾ ಆಡಿಯೋದಲ್ಲಿ ಮಾತನಾಡಲಾಗಿದೆ.
ಇನ್ನು ಚುನಾವಣೆ ಹತ್ತಿರದಲ್ಲಿರುವಾಗಲೇ ಈ ಆಡಿಯೋ ವೈರಲ್ ಆಗಿದ್ದು, ಬಿಜೆಪಿಯೊಳಗೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಆದರೆ ಆಡಿಯೋ ಬಗ್ಗೆ ಶಿವರಾಜ್ ಪಾಟೀಲ್ ಅವರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.