ಬೆಳಗಾವಿ, ಮಾ 31 (DaijiworldNews/DB): ಮಹಿಳೆಯರಿಗಾಗಿ ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಆವರಣದಲ್ಲಿ ನಡೆದಿದ್ದ ಅರಿಶಿನ-ಕುಂಕುಮ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಸಚಿವೆ ಶಶಿಕಲಾ ಜೊಲ್ಲೆ ಸಹಿತ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಶಶಿಕಲಾ ಜೊಲ್ಲೆ ಹಾಗೂ ರಣರಾಗಿನಿ ಮಹಿಳಾ ಮಂಡಳ ಅಧ್ಯಕ್ಷೆ ವಿರುದ್ದ ದೂರು ದಾಖಲಾಗಿದೆ. ಕಾರ್ಯಕ್ರಮದಲ್ಲಿ ಜೊಲ್ಲೆ ಸಭೆಯಲ್ಲಿದ್ದ ಜನರ ನಡುವೆ ಕುಳಿತಿದ್ದರು. ಈ ವೇಳೆ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಅವರು ಇರುವ ಹಾಡಿನ ವೀಡಿಯೋವನ್ನು ಬಿತ್ತರಿಸಿ ಬಿಜೆಪಿ ಚಿಹ್ನೆಯನ್ನು ಪ್ರದರ್ಶಿಸಲಾಗಿತ್ತು. ಬಳಿಕ ಸಾಮೂಹಿಕ ಊಟದ ವ್ಯವಸ್ಥೆ ಕೂಡಾ ಇತ್ತು. ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾಧಿಕಾರಿಗಳ ಅನುಮತಿ ಉಲ್ಲಂಘನೆ ಮಾಡಿ ಕಾರ್ಯಕ್ರಮ ನಡೆಸಿರುವ ಆರೋಪದ ಮೇಲೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ನಿಪ್ಪಾಣಿ ಠಾಣೆಯಲ್ಲಿ ನಿಪ್ಪಾಣಿ ನಗರಸಭೆ ಪೌರಾಯುಕ್ತ ಜಗದೀಶ ಹುಲಗಜ್ಜೆ ದೂರು ನೀಡಿದ್ದಾರೆ.