ನವದೆಹಲಿ, ಮಾ 30 (DaijiworldNews/DB): ಗುಜರಾತ್ನಲ್ಲಿ ನಡೆದ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಿಬಿಐ ನನ್ನ ಮೇಲೆ ತೀವ್ರ ಒತ್ತಡ ಹಾಕಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರನ್ನು ಈ ಪ್ರಕರಣದಲ್ಲಿ ಸಿಲುಕಿಸಿದಂತೆ ತನ್ನ ಮೇಲೆಯೂ ಸಿಬಿಐ ಒತ್ತಡ ಹಾಕಿತ್ತು. ಮೋದೀಜಿಯವರನ್ನು ಈ ಪ್ರಕರಣದಲ್ಲಿ ಬಂಧಿಸುವಂತೆ ನನ್ನ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ ಬಿಜೆಪಿ ಈ ಸಂಬಂಧ ಗಲಾಟೆ ಎಬ್ಬಿಸುವ ಕೆಲಸವನ್ನು ಮಾಡಲಿಲ್ಲ ಎಂದರು.
ಕ್ರಿಮಿನಲ್ ಮಾನನಷ್ಟ ಮೊಕದ್ದೆಮೆಯಲ್ಲಿ ರಾಹುಲ್ ಗಾಂಧಿಯವರು ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ, ಶಾಸಕಾಂಗದ ಸದಸ್ಯತ್ವ ಕಳೆದುಕೊಂಡ ಏಕೈಕ ರಾಜಕಾರಣಿ ಅವರಲ್ಲ. ಅವರು ಉನ್ನತ ನ್ಯಾಯಾಲಯಕ್ಕೆ ಹೋಗುವ ಬದಲು ಅಳಲು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಭವಿಷ್ಯಕ್ಕಾಗಿ ಪ್ರಧಾನಿ ಮೋದಿಯವರ ಮೇಲೆ ವೃಥಾ ಆರೋಪಿಸುತ್ತಿದ್ದಾರೆ ಎಂದು ಅಮಿತ್ ಶಾ ದೂರಿದರು.
ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಪ್ರಮುಖ ರಾಜಕಾರಣಿಗಳು 2013ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಸುಪ್ರೀಂ ಆದೇಶದ ಪ್ರಕಾರ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಆದರೆ ಅವರಾರೂ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿಲ್ಲ. ಚುನಾಯಿತ ಪ್ರತಿನಿಧಿಗೆ ಶಿಕ್ಷೆಯಾದರೆ ಸ್ಥಾನ ಕಳೆದುಕೊಳ್ಳುತ್ತಾರೆ. ಇದು ದೇಶದ ಕಾನೂನು ಎಂದರು.
ದೇಶದ ಕಾನೂನಿನ ಪ್ರಕಾರವೇ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಸೇಡಿನ ರಾಜಕಾರಣಕ್ಕೆ ಇಲ್ಲಿ ಅವಕಾಶವಿಲ್ಲ. ಅವರ ಸರ್ಕಾರ ಇದ್ದಾಗಲೇ ಸುಪ್ರೀಂಕೋರ್ಟ್ ನೀಡಿದ ತೀರ್ಪಿದು ಎಂದು ಅಮಿತ್ ಶಾ ತಿಳಿಸಿದರು.