ಚೆನ್ನೈ, ಮಾ 30 (DaijiworldNews/DB): ಹೆತ್ತವರ ಸಾವಿನಿಂದ ಅಮೇರಿಕಾ ದಲ್ಲಿ ಅನಾಥವಾಗಿರುವ ಎರಡು ವರ್ಷದ ಮಗುವನ್ನು ತಮಿಳುನಾಡಿಗೆ ಕರೆ ತರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ಭರವಸೆ ನೀಡಿದೆ.
ಕೇಂದ್ರ ಸರ್ಕಾರದ ಮೂಲಕ ಕಾನೂನಾತ್ಮಕ ಮತ್ತು ರಾಜತಾಂತ್ರಿಕ ನೆರವು ಸಹಿತ ಎಲ್ಲಾ ರೀತಿಯ ನೆರವುಗಳನ್ನು ನೀಡಲಾಗುವುದು. ಸದ್ಯ ಅಮೇರಿಕಾದಲ್ಲಿ ಎರಡು ವರ್ಷದ ಮಗು ನೆರೆಮನೆಯವರ ರಕ್ಷಣೆಯಲ್ಲಿದೆ. ಶೀಘ್ರ ಆತನನ್ನು ತಮಿಳುನಾಡಿನಲ್ಲಿರುವ ಆತನ ಕುಟುಂಬಕ್ಕೆ ಹಸ್ತಾಂತರಿಸಲು ಕ್ರಮ ವಹಿಸಲಾಗುವುದು. ಸಮಸ್ಯೆಯನ್ನು ವಿದೇಶಾಂಗ ಸಚಿವಾಲಯದ ಮೂಲಕ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.
ಅಮೇರಿಕಾದ ಮಿಸ್ಸಿಸ್ಸಿಪಿಯಲ್ಲಿ ಈ ಮಗುವಿನ ಹೆತ್ತವರು ಕಳೆದ ವರ್ಷ ಸಾವನ್ನಪ್ಪಿದ್ದರು. ಆ ಬಳಿಕ ನೆರೆಮನೆಯವರ ರಕ್ಷಣೆಯಲ್ಲಿರುವ ಮಗುವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಮಗುವಿನ ಅಜ್ಜ, ಅಜ್ಜಿ ಮತ್ತು ದೊಡ್ಡಮ್ಮ ಕಾನೂನಾತ್ಮಕ ಹೋರಾಟ ನಡೆಸಿದ್ದು, ಇದೀಗ ಸರ್ಕಾರದ ಮೊರೆ ಹೋಗಿದ್ದಾರೆ.