ಶ್ರೀನಗರ, ಮಾ 30 (DaijiworldNews/DB): ಜಮ್ಮು ಮತ್ತು ಕಾಶ್ಮೀರದ ಹಿರಾನಗರದ (ಕತುವಾ) ಸನ್ಯಾಲ್ನಲ್ಲಿರುವ ಭಾರತ-ಪಾಕ್ ಗಡಿಗಿಂತ ನಾಲ್ಕು ಕಿಲೋ ಮೀಟರ್ ದೂರಳತೆಯ ಪೊಲೀಸ್ ಪೋಸ್ಟ್ ಬಳಿ ಐಇಡಿ ಸ್ಪೋಟ ಸಂಭವಿಸಿದ್ದು, ಇದು ಪಕ್ಕದ ನಾಲ್ಕೈದು ಹಳ್ಳಿಗಳಿಗೆ ಕೇಳಿಸಿದೆ.
ಅರಣ್ಯ ಪ್ರದೇಶದಲ್ಲಿ ಈ ಸ್ಪೋಟ ಸಂಭವಿಸಿದ್ದು, ರಾತ್ರಿ 9:30ರ ವೇಳೆಗೆ ನಾಲ್ಕೈದು ಗ್ರಾಮಗಳಲ್ಲಿ ಸ್ಪೋಟದ ಸದ್ದು ಕೇಳಿಸಿದೆ. ಅಲ್ಲದೆ ಈ ಭಾಗದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಪೋಟದ ಬೆನ್ನಲ್ಲೇ ಕತುವಾಗೆ ಎಸ್ಎಸ್ಪಿ ಶಿವದೀಪ್ ಸಿಂಗ್ ಜಮ್ವಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಕೂಡಾ ಆಗಮಿಸಿದೆ. ಇನ್ನು ಸ್ಪೋಟ ಸಂಭವಿಸಲು ಕಾರಣವೇನೆಂಬುದು ತಿಳಿದು ಬಂದಿಲ್ಲ.
ಸ್ಪೋಟದ ಬೆನ್ನಲ್ಲೇ ಸಿಆರ್ಪಿಎಫ್, ಪೊಲೀಸರು ಮತ್ತು ಎಸ್ಒಜಿ ಯೋಧರು ಇಡೀ ರಾತ್ರಿ ಆ ಪ್ರದೇಶದಲ್ಲಿ ಶೋಧ ನಡೆಸಿದ್ದಾರೆ. ಮುಂಜಾಗ್ರತೆಯಾಗಿ ಹಳೆ ಕತುವಾ-ಸಾಂಬಾ ಮಾರ್ಗದಲ್ಲಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಹೀರಾನಗರದ ಬಿಡಿಸಿ ಅಧ್ಯಕ್ಷ ರಾಮಲಾಲ್ ಕಾಲಿಯಾ ತಿಳಿಸಿದ್ದಾರೆ.