ತಿರುವನಂತಪುರ, ಮಾ 29 (DaijiworldNews/DB): ಸಿಪಿಎಂ ಮಹಿಳಾ ನಾಯಕಿಯರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ದ ಪ್ರಕರಣ ದಾಖಲಾಗಿದೆ.
ಸಿಪಿಐ (ಎಂ) ಪಕ್ಷದ ನಾಯಕಿ ಮತ್ತು ಮಾಜಿ ಸಂಸದೆ ಸಿ.ಎಸ್ ಸುಜಾತ ಅವರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 509 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ) ಅಡಿಯಲ್ಲಿ ಸುರೇಂದ್ರನ್ ವಿರುದ್ದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೆಕ್ಷನ್ 354 ಎ ಅಡಿಯಲ್ಲಿ ಆರೋಪಿ ಮೇಲಿನ ಆರೋಪ ಸಾಬೀತಾದಲ್ಲಿ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಮತ್ತು ಸೆಕ್ಷನ್ 509 ಅಡಿಯಲ್ಲಿ ಕನಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನು ಪ್ರಕಾರ ಅವಕಾಶವಿದೆ.
ತ್ರಿಶೂರ್ನಲ್ಲಿ ಕಳೆದ ಭಾನುವಾರ ನಡೆದ ಮಹಿಳಾ ಮೋರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆ. ಸುರೇಂದ್ರನ್ ಅವರು ಸಿಪಿಐ(ಎಂ) ಮಹಿಳಾ ನಾಯಕಿಯರ ವಿರುದ್ದ ಬಾಡಿ ಶೇಮಿಂಗ್ ಹಾಗೂ ಜನಾಂಗೀಯ ನಿಂದನೆಯಂತಹ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.