ಬಳ್ಳಾರಿ, ಮಾ 29 (DaijiworldNews/DB): ಬಳ್ಳಾರಿ ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಸದಸ್ಯೆ ಡಿ. ತ್ರಿವೇಣಿ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
23 ವರ್ಷದ ತ್ರಿವೇಣಿ ಅವರ ಪರ 28 ಮತ ಬಂದಿದ್ದರೆ, ಬಿಜೆಪಿ ಮೇಯರ್ ಅಭ್ಯರ್ಥಿ ನಾಗರತ್ನ ಅವರ ಪರ 16 ಮತಗಳು ಚಲಾವಣೆಯಾಗಿದ್ದವು. ಉಪ ಮೇಯರ್ ಆಗಿ ಬಿ. ಜಾನಕಿ ಆಯ್ಕೆಯಾಗಿದ್ದಾರೆ.
ಪ್ಯಾರಾ ಮೆಡಿಕಲ್ ವಿದ್ಯಾಭ್ಯಾಸ ಮಾಡಿರುವ ತ್ರಿವೇಣಿ ಅವರು ಅತಿ ಕಿರಿ ವಯಸ್ಸಿನಲ್ಲಿ ಮೇಯರ್ ಆಗುವ ಮೂಲಕ ರಾಜ್ಯದಲ್ಲೇ ದಾಖಲೆ ಬರೆದಿದ್ದಾರೆ. ಅವರ ತಾಯಿ ಸುಶೀಲಾ ಬಾಯಿ ಈ ಹಿಂದೆ ಬಳ್ಳಾರಿ ಪಾಲಿಕೆ ಮೇಯರ್ ಆಗಿದ್ದರು.
2022ರ ಮಾರ್ಚ್ನಲ್ಲಿ ಪಾಲಿಕೆಗೆ ಚುನಾವಣೆ ನಡೆದಿತ್ತು. ಈ ವೇಳೆ 4ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ತ್ರಿವೇಣಿ 501 ಮತ ಪಡೆದು ಗೆಲುವು ಸಾಧಿಸಿ ಪಾಲಿಕೆ ಸದಸ್ಯರಾಗಿದ್ದರು. ಇಂದು ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆದಿತ್ತು.