ಬೆಂಗಳೂರು, ಮಾ 28 (DaijiworldNews/MS): ಎಸ್.ಸಿ ಪಟ್ಟಿಯಿಂದ ಕೈಬಿಡುವುದಾಗಿ ಕಾಂಗ್ರೆಸ್ ರಾಜಕೀಯ ಪ್ರೇರಿತ ಕುತಂತ್ರ ಮಾಡಿದ್ದು ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಎಸ್.ಸಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಮುದಾಯಗಳಿಗೆ ಕಾಂಗ್ರೆಸ್ ನವರು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಬಂಜಾರ, ಭೋವಿ, ಕೊರಚ ಯಾರನ್ನೂ ಕೂಡ ಪಟ್ಟಿಯಿಂದ ತೆಗೆಯಲಾಗುವುದಿಲ್ಲ. ಈ ಬಗ್ಗೆ ಫೆಬ್ರವರಿ ಮಾಹೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಇವರೆಲ್ಲಾ ಮಹಾರಾಜರ ಕಾಲದಿಂದಲೂ ಇರುವಂಥ ಸಮುದಾಯಗಳು. ಸಂವಿಧಾನ ಆದ ನಂತರ ಇದ್ದ ಆರು ಸಮುದಾಯಗಳಲ್ಲಿ ಇವೂ ಇದ್ದು, ಇದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆಧಾರ ಸಮೇತವಾಗಿ ನೀಡಲಾಗಿದೆ.
ಅವರಿಗೆ ಗೊತ್ತು:
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಪಕ್ಷಗಳ ವರಿಷ್ಠರು ಆಫರ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಯಾರು ಯಾವಾಗ ಏನು ಕೊಡುಗೆ ನೀಡುತ್ತಾರೆ, ಅವರು ಏನು ಸ್ವೀಕಾರ ಮಾಡುತ್ತಾರೆ ಎಂದು ಅವರಿಗೇ ಗೊತ್ತು ಎಂದರು.
ನಾವು ಬೇರೆ ಪಕ್ಷಗಳ ರೀತಿ ಸುಳ್ಳು ಅಂಕಿ ಸಂಖ್ಯೆಗಳನ್ನು ಹೇಳುವುದಿಲ್ಲ. ನಮಗೆ ಎಲ್ಲಾ ಸಮೀಕ್ಷೆಗಳ ವರದಿ ಬಂದಿದ್ದು, ನಾವು ಬೇರೆ ಪಕ್ಷಗಳಿಗಿಂತ ಮುಂದಿದ್ದೇವೆ ಎಂದರು. ಇದು ಪಕ್ಷದ ಆಂತರಿಕ ವಿಚಾರವಾಗಿದ್ದು, ಬಹಿರಂಗ ಪಡಿಸಲು ಆಗುವುದಿಲ್ಲ ಎಂದರು.
ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಸಹಕಾರ
ಕಳೆದ ಬಾರಿ 27 ನೇ ತಾರೀಖು ಚುನಾವಣೆ ಘೋಷಣೆಯಾಗಿತ್ತು. 27 ರ ನಂತರ ಯಾವ ದಿನವಾದರೂ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿತ್ತು. ನೀತಿ ಸಂಹಿತೆ ಕೂಡ ಜಾರಿಯಾಗಲಿದ್ದು, ಎಲ್ಲಾ ಪಕ್ಷಗಳೂ ನೀತಿ ಸಂಹಿತೆಯ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿ ಮಾಡಿದರು. ಪ್ರಮುಖ ಅಭಿವೃದ್ಧಿ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕುವುದು ಎಲ್ಲಾ ಸರ್ಕಾರಗಳ ಕಾಲದಲ್ಲಿಯೂ ಉಳಿಯುತ್ತದೆ.
ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 5-6 ಬಾರಿ ಭೇಟಿ ನೀಡಿದ್ದು, ಕಳೆದ ಮೂರು ತಿಂಗಳಲ್ಲಿ ಪ್ರವಾಸ ಮಾಡದ ಜಿಲ್ಲೆಯೇ ಇಲ್ಲ. ನಮಗೆ ಸಂಪೂರ್ಣ ಹಾಗೂ ಸ್ಪಷ್ಟ ಬಹುಮತ ಬರುವ ವಿಶ್ವಾಸವಿದೆ. ಮತ್ತೊಮ್ಮೆ 2023 ರಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ.