ನವದೆಹಲಿ, ಮಾ 29 (DaijiworldNews/DB): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಇದೀಗ ಏಪ್ರಿಲ್ 1ರಿಂದ ಔಷಧಗಳ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಔಷಧಗಳ ಬೆಲೆಯನ್ನು ಶೇ.12.12ರಷ್ಟು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು ಅನುಮೋದಿಸಿದೆ.
ಔಷಧಗಳ ಮೇಲಿನ ಬೆಲೆ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ. ಇನ್ನು ಈವರೆಗೆ ಏರಿಸಲ್ಪಟ್ಟ ಬೆಲೆ ಏರಿಕೆಗಳ ಪೈಕಿ ಇದೇ ಅತ್ಯಧಿಕ ಏರಿಕೆ ಎಂದು ತಿಳಿದು ಬಂದಿದೆ. ಹೃದ್ರೋಗ ಔಷಧ, ನೋವು ನಿವಾರಕ, ಆಂಟಿ ಬಯೋಟಿಕ್, ಗಂಟಲಿಗೆ ಸಂಬಂಧಿಸಿದ ಔಷಧ, ಆಂಟಿ ಫಂಗಲ್, ಆಂಟಿ ಸೆಪ್ಟಿಕ್ ಸೇರಿದಂತೆ ಸುಮಾರು 800 ಔಷಧಗಳ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ವರದಿಯಾಗಿದೆ.
ಔಷಧಗಳ ಮೇಲೆ ಶೇ.10.76 ಬೆಲೆಯನ್ನು ಕಳೆದ ವರ್ಷ ಏರಿಸಲಾಗಿತ್ತು. ಔಷಧಗಳನ್ನು ಶೆಡ್ಯೂಲ್ಡ್ ಡ್ರಗ್ಸ್ ಮತ್ತು ನಾನ್ ಶೆಡ್ಯೂಲ್ಡ್ ಡ್ರಗ್ಸ್ ಎಂಬುದಾಗಿ ವರ್ಗೀಕರಣ ಮಾಡಲಾಗುತ್ತದೆ. ನಾನ್ ಶೆಡ್ಯೂಲ್ಡ್ ಡ್ರಗ್ಸ್ ಬೆಲೆ ವಾರ್ಷಿಕವಾಗಿ ಶೇ.10 ಹೆಚ್ಚಳ ಮಾಡಲು ಅವಕಾಶವಿರುತ್ತದೆ.