ಬೆಂಗಳೂರು, ಮಾ 29 (DaijiworldNews/DB): ಕೇಂದ್ರ ಚುನಾವಣಾ ಆಯೋಗವು ದುರ್ಗಾಷ್ಟಮಿಯ ಪುಣ್ಯ ದಿನದಂದೇ ರಾಜ್ಯಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಕಾಂಗ್ರೆಸ್ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ಶ್ರಮಿಸೋಣ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬುಧವಾರ ಟ್ವೀಟ್ ಮಾಡಿದ ಅವರು, ದುರ್ಗಾಷ್ಟಮಿಯ ಪುಣ್ಯದಿನದಂದು ಚುನಾವಣೆ ಘೋಷಣೆಯಾಗಿದೆ. 40% ಸರ್ಕಾರ ಮತ್ತು ಅದರ ಲೂಟಿಯ ಪರಾಕಾಷ್ಠೆಯಿಂದ ರಾಜ್ಯವನ್ನು ಮುಕ್ತಗೊಳಿಸುವುದು ಕಾಂಗ್ರೆಸ್ನ ಸಂಕಲ್ಪ. ಆ ಸಂಕಲ್ಪಕ್ಕಾಗಿ ಕಾಂಗ್ರೆಸ್ ಶ್ರಮಿಸಲಿದೆ ಎಂದರು.
ಬ್ರಾಂಡ್ ಕರ್ನಾಟಕವನ್ನು ಮರು ನಿರ್ಮಾಣ ಮಾಡುವ ಉದ್ದೇಶದಿಂದ ನಾವು ಕೆಲಸ ಮಾಡುತ್ತೇವೆ. ಕನ್ನಡಿಗರ ಅಭಿಮಾನ ಬೆಳೆಯಲಿ. ಕಾಂಗ್ರೆಸ್ ನೀಡಿದ ಭರವಸೆಗಳ ಜಾರಿಗಾಗಿ ಬದ್ದರಾಗೋಣ. ಆ ಮೂಲಕ ಕರ್ನಾಟಕ ಗೆಲ್ಲಲಿ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13 ಫಲಿತಾಂಶ ಪ್ರಕಟಗೊಳ್ಳಲಿದೆ.