ಉತ್ತರಾಖಂಡ್, ಮಾ 29 (DaijiworldNews/DB): ಆಕ್ಷೇಪಾರ್ಹ ಹಾಗೂ ಅಶ್ಲೀಲವಾಗಿ ಮಹಿಳಾ ಕ್ರಿಕೆಟಿಗರೊಂದಿಗೆ ಮಾತನಾಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ಕ್ರಿಕೆಟ್ ತರಬೇತುದಾರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಕ್ರಿಕೆಟ್ ತರಬೇತುದಾರ ನರೇಂದ್ರ ಶಾ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಈತ ಉತ್ತರಾಖಂಡ್ನ ಕ್ರಿಕೆಟ್ ಅಕಾಡೆಮಿಯೊಂದರಲ್ಲಿ ತರಬೇತಿ ನೀಡುತ್ತಿದ್ದ. ಕೇಂದ್ರಕ್ಕೆ ತರಬೇತಿಗಾಗಿ ಬರುತ್ತಿದ್ದ ಮಹಿಳಾ ಆಟಗಾರ್ತಿಯೊಬ್ಬಳ ಜೊತೆ ಈತ ಅಶ್ಲೀಲವಾಗಿ ಫೋನ್ನಲ್ಲಿ ಮಾತನಾಡಿದ್ದ. ಅಲ್ಲದೆ ಆಕೆಯ ಜಾತಿ ಬಗ್ಗೆಯೂ ನಿಂದಿಸಿದ್ದ. ಈ ವಿಚಾರವನ್ನು ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಮನೆಯವರು ಪೊಲೀಸ್ ದೂರು ನೀಡಿದ್ದರು.
ಇನ್ನು ಇತರ ಮಹಿಳಾ ಆಟಗಾರ್ತಿಯರೂ ಈ ಹಿಂದೆ ನರೇಂದ್ರ ವಿರುದ್ದ ದೂರಿತ್ತಿದ್ದರು. ಅಶ್ಲೀಲವಾಗಿ ಮಾತನಾಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ನರೇಂದ್ರ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಶಾ ವಿರುದ್ಧ ಭಾರತೀಯ ದಂಡ ಸಂಹಿತೆ, ಪೋಕ್ಸೊ ಕಾಯ್ದೆ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.