ನವದೆಹಲಿ, ಮಾ 28 (DaijiworldNews/SM): ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಪಕ್ಷಪಾತ ಆರೋಪ ಹೊರಿಸಿದ ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿವೆ.
ಈ ಕುರಿತು ಪ್ರಸ್ತಾವನೆಯನ್ನು ಇಂದು ಬೆಳಗ್ಗೆ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಮಂಡಿಸಲಾಗಿದೆ. ಇತರ ಪಕ್ಷದ ನಾಯಕರೊಂದಿಗೆ ಕಾಂಗ್ರೆಸ್ ನಾಯಕರು ಈ ಕುರಿತು ಮಾತನಾಡುತ್ತಿದ್ದಾರೆ ಎನ್ನಲಾಗಿದೆ.
ಲೋಕಸಭೆಯಲ್ಲಿ ಸೋಮವಾರ ಈ ಪ್ರಸ್ತಾಪವನ್ನು ಮಂಡಿಸುವ ಸಾಧ್ಯತೆಯಿದೆ. ಆದರೆ ಈ ಕ್ರಮ ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಧಕ್ಕೆ ತರಬಹುದು ಎಂಬ ಕಾರಣಕ್ಕೆ ಕೆಲವು ಪಕ್ಷಗಳು ವಿರೋಧಿಸುತ್ತಿವೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಕೆಲವೇ ಗಂಟೆಗಳಲ್ಲಿ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ ಕಾರಣಕ್ಕಾಗಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ. ಸದನ ಸುಸೂತ್ರವಾಗಿದ್ದಾಗ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಾಧ್ಯ ಎಂದು ತಿಳಿದುಬಂದಿದೆ.