ನಾಗ್ಪುರ, ಮಾ 28 (DaijiworldNews/DB): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ ಬೆಳಗಾವಿ ಜೈಲಿನಲ್ಲಿರುವ ಆರೋಪಿಯನ್ನು ನಾಗ್ಪುರ ಪೊಲೀಸರು ಮಂಗಳವಾರ ತಮ್ಮ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಆರೋಪಿ ಜಯೇಶ್ ಪೂಜಾರಿಯನ್ನು ಮಂಗಳವಾರ ಬೆಳಗ್ಗೆಯೇ ವಿಶೇಷ ವಿಮಾನದ ಮೂಲಕ ನಾಗ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಸಚಿವರಿಗೆ ಜೀವ ಬೆದರಿಕೆಯೊಡ್ಡಿ ಎರಡು ಬಾ ರಿ ನಾಗ್ಪುರದಲ್ಲಿರುವ ಗಡ್ಕರಿ ಕಚೇರಿಯ ಸ್ಥಿರ ದೂರವಾಣಿಗೆ ಈತ ಕರೆ ಮಾಡಿದ್ದ. ಈ ಕರೆಯ ಹಿಂದಿನ ಉದ್ದೇಶ ತಿಳಿದುಕೊಳ್ಳಲು ಆತನನ್ನು ವಿಚಾರಣೆಗೊಳಪಡಿಸಲಾಗುವುದು. ಅಲ್ಲದೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 14ರಂದು ಗಡ್ಕರಿ ಕಚೇರಿಗೆ ಕರೆ ಮಾಡಿದ್ದ ಈತ 100 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೆ ತಾನು ಭೂಗತಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯ ಎಂದು ಹೇಳಿಡದ್ದ. ಮಾರ್ಚ್ 21ರಂದೂಮತ್ತೆ ಕಚೇರಿಯ ಸ್ಥಿರ ದೂರವಾಣಿಗೆ ಕರೆ ಮಾಡಿದ್ದ ಈತ 10 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ.