ಮೈಸೂರು, ಮಾ 28 (DaijiworldNews/DB): ವರುಣಾ ಕ್ಷೇತ್ರದಲ್ಲೇ ಗೆದ್ದು ನಾನು ಮುಖ್ಯಮಂತ್ರಿ ಆಗಿದ್ದು. ನನ್ನ ಹುಟ್ಟೂರಾದ ವರುಣಾದಲ್ಲೇ ಕೊನೆಯ ಚುನಾವಣೆಯನ್ನು ಎದುರಿಸಬೇಕೆಂಬುದು ನನ್ನ ಆಸೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಲಕ್ಕಿ ಕ್ಷೇತ್ರ, ಅನ್ಲಕ್ಕಿ ಕ್ಷೇತ್ರ ಎಂಬುದೆಲ್ಲ ಇಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಈ ಹಿಂದೆ ಸಿಎಂ ಆಗಿರುವುದು ನನ್ನ ಹುಟ್ಟೂರು ವರುಣಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ. ಕೊನೆಯ ಚುನಾವಣೆಯನ್ನೂ ಅಲ್ಲೇ ಎದುರಿಸುತ್ತೇನೆ. ಇದು ನನ್ನ ಆಸೆ ಎಂದರು.
ಇನ್ನು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಜನರಿಂದ ಹೆಚ್ಚಿನ ಒತ್ತಡ ಬರುತ್ತಿದೆ. ಹೀಗಾಗಿ ವರುಣಾದೊಂದಿಗೆ ಕೋಲಾರದಲ್ಲಿಯೂ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.
ತಾವು ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂಬುದಾಗಿ ಯತೀಂದ್ರರೇ ಹೇಳಿದ್ದಾರೆ. ಹೀಗಾಗಿ ಆ ಬಗ್ಗೆ ಚರ್ಚೆ ಅನಗತ್ಯ ಎಂದವರು ಇದೇ ವೇಳೆ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಈ ಬಾರಿಯೂ ಅದೇ ನಡೆ ಅನುಸರಿಸಿಕೊಂಡರೂ ಆಶ್ಷರ್ಯವಿಲ್ಲ ಎಂದರು.