ಬೆಂಗಳೂರು, ಮಾ 28 (DaijiworldNews/DB): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲಿನ ದಾಳಿ ಹಿಂದೆ ’ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಎಸ್ವೈ ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ದಾರಗಳಲ್ಲಿ ಅವರ ಪಾತ್ರವಿಲ್ಲ, ಆದರೂ ಸರ್ಕಾರದ ಅವಾಂತರಕ್ಕೆ ಅವರ ಮನೆ ಮೇಲೆ ದಾಳಿ ಆಗಿದ್ದೇಕೆ? ಎಂದು ಪ್ರಶ್ನಿಸಿದೆ.
ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಅವರ ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ ‘ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತ ಎಂದಿದ್ದು, ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರನ್ನು ಪರೋಕ್ಷವಾಗಿ ಕಾಂಗ್ರೆಸ್ ಕುಟುಕಿದೆ.
ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆ, ಘರ್ಷಣೆಗಳೆಲ್ಲದರ ಬೀಜ ಬಿತ್ತುವುದು ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಏಕೆ? ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ ಅಥವಾ ‘ಸಂತೋಷ ಕೂಟ’ವನ್ನು ಮೆಚ್ಚಿಸುವ ಷಡ್ಯಂತ್ರವೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ. ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು? ಆರಗ ಜ್ಞಾನೇಂದ್ರ ಅವರೇ, ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ಷಡ್ಯಂತ್ರವೇ? ಮೀಸಲಾತಿ ಅವಾಂತರಕ್ಕೆ ಹೊಣೆಗಾರರಲ್ಲದ ಬಿಎಸ್ವೈ ಮನೆ ಮೇಲೆ ದಾಳಿ ಮಾಡಿದ್ದು ಯಾರ ‘ಸಂತೋಷ’ದ ಕಾರಣಕ್ಕೆ? ಎಂದೂ ಪ್ರಶ್ನೆ ಎಸೆದಿದೆ.
ಒಳ ಮೀಸಲಾತಿ ಜಾರಿ ವಿರೋಧಿಸಿ ಬಂಜಾರ ಸಮುದಾಯದವರು ನಡೆಸಿದ್ದ ಪ್ರತಿಭಟನೆ ಮೇಲೆ ಸೋಮವಾರ ಶಿಕಾರಿಪುರದಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರ ನಿವಾಸ ಹಾಗೂ ಮನೆ ಮುಂಭಾಗದಲ್ಲಿರುವ ಕಚೇರಿ ಮೇಲೆ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಘಟನೆ ಸಂಬಂಧ 10 ಮಂದಿ ಆರೋಪಿಗಳನ್ನು ಶಿಕಾರಿಪುರ ಪೊಲೀಸರು ಬಂಧಿಸಿದ್ದಾರೆ.