ನವದೆಹಲಿ, ಮಾ 28 (DaijiworldNews/DB): ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ಇಂದು ಸಂಜೆ 7 ಗಂಟೆಗೆ ಲೋಕತಂತ್ರ ಬಚಾವೋ ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಹಳೆ ದೆಹಲಿಯ ಚಾಂದಿನಿ ಚೌಕ್ನಲ್ಲಿರುವ ಕೆಂಪುಕೋಟೆಯಿಂದ ಮೆರವಣಿಗೆ ಆರಂಭವಾಗಲಿದೆ. ಪಕ್ಷದ ಸಂಸದರು, ಮುಖಂಡರು ಸಹಿತ ಹಲವರು ಪಾಲ್ಗೊಳ್ಳಲಿದ್ದಾರೆ.
ಪಕ್ಷದ ಸಂಸದರು ಮೆರವಣಿಗೆಯುದ್ದಕ್ಕೂ ಕೈಯಲ್ಲಿ ಪಂಜು ಹಿಡಿದು ಹೆಜ್ಜೆ ಹಾಕಲಿದ್ದಾರೆ. ಇನ್ನು ರಾಹುಲ್ ಅವರ ಲೋಕಸಭಾ ಸದಸ್ಯತ್ವ ಅನರ್ಹತೆ ಖಂಡಿಸಿ ನಾವು ಬೀದಿಗಿಳಿದು ಪ್ರತಿಭಟನೆ ಮಾಡಲಿದ್ದೇವೆ. ಅಲ್ಲದೆ ಇದೇ ವಿಚಾರದಲ್ಲಿ ಜನರ ಬಳಿ ಹೋಗುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.