ಬೆಂಗಳೂರು, ಮಾ 28 (DaijiworldNews/DB): ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ನಕಲಿ ಬಿಲ್ ಪ್ರಕರಣದ ದೋಷಿಯಾಗಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾವೇರಿ ಶಾಸಕ ನೆಹರೂ ಸಿ. ಓಲೇಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ವಿಶೇಷವೆಂದರೆ ಬಿಜೆಪಿ ಕಾರ್ಯಕರ್ತರೇ ಓಲೆಕಾರ್ ಅನರ್ಹಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ!
ನಕಲಿ ಬಿಲ್ ಪ್ರಕರಣದ ದೋಷಿಯಾಗಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾವೇರಿ ಶಾಸಕ ನೆಹರೂ ಸಿ. ಓಲೇಕಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಮುಖಂಡ ಸಂತೋಷ್ ರೆಡ್ಡಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ನೆಹರೂ ಓಲೆಕಾರ್ ಅವರು ದೋಷಿ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದ್ದು, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದಾಗ್ಯೂ ಅವರ ಮೇಲೆ ಯಾವುದೇ ಕ್ರಮ ಆಗಿಲ್ಲ. ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೇಕಾರ್ ಅವರು ಸರ್ಕಾರದ ಸಿವಿಲ್ ಕೆಲಸಗಳನ್ನು ಬೇರೆಯವರಿಗೆ ಸಿಗದಂತೆ ತಮ್ಮ ಪುತ್ರರಿಬ್ಬರಿಗೆ ಕೊಡಿಸಿದ್ದರು ಎಂಬುದಾಗಿ ಹಾವೇರಿಯ ಶಶಿಧರ್ ಹಳ್ಳಿಕೇರಿ ಅವರು 2013ರಲ್ಲಿ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಹಾವೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಿತ್ತು. ಅಲ್ಲದೆ ವಿಶೇಷ ನ್ಯಾಯಾಲಯವು ಪ್ರಕರಣದ ತನಿಖೆ ನಡೆಸಿ ಓಲೇಕಾರ್ರನ್ನು ದೋಷಿ ಎಂದು ಘೋಷಿಸಿದ್ದಲ್ಲದೆ, ಎರಡು ವರ್ಷ ಜೈಲು ಶಿಕ್ಷೆ 2 ಸಾವಿರ ರೂ. ದಂಡ ವಿಧಿಸಿತ್ತು. ಅವರ ಪುತ್ರರಿಗೆ ತಲಾ 6 ಸಾವಿರ ರೂ. ದಂಡ ವಿಧಿಸಲಾಗಿತ್ತು. ಆ ಬಳಿಕ ಓಲೇಕಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಆನಂತರ ಅವರಿಗೆ ಜಾಮೀನು ಕೂಡಾ ಮಂಜೂರಾಗಿತ್ತು.