ನವದೆಹಲಿ, ಮಾ 28 (DaijiworldNews/HR): "ಲೋಕಸಭೆಯ ನಾಲ್ಕು ಅವಧಿಯಿಂದ ನಾನು ಇಲ್ಲಿದ್ದು, ಅನೇಕ ಖುಷಿ ಕ್ಷಣಗಳನ್ನು ಕಳೆದಿದ್ದೇನೆ. ನಿಮ್ಮ ನೋಟಿಸ್ಗೆ ಬದ್ಧನಾಗಿದ್ದು, ಬಂಗಲೆ ಖಾಲಿ ಮಾಡುತ್ತೇನೆ" ಎಂದು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭಾ ಕಾರ್ಯದರ್ಶಿ ನೋಟಿಸ್ ನೀಡಿರುವುದಕ್ಕೆ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ ಪತ್ರವನ್ನು ಬರೆದಿದ್ದಾರೆ.
ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹರಾದ ಬೆನ್ನಲ್ಲೇ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಸೋಮವಾರ ಲೋಕಸಭಾ ಕಾರ್ಯದರ್ಶಿ ತುಘಲಕ್ ಲೇನ್ನಲ್ಲಿ ರಾಹುಲ್ ಗಾಂಧಿ ವಾಸವಾಗಿರುವ 12ನೇ ಸಂಖ್ಯೆಯ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 23ರೊಳಗೆ ಖಾಲಿ ಮಾಡಿ ಎಂದು ಕಾಂಗ್ರೆಸ್ ನಾಯಕನಿಗೆ ನೋಟಿಸ್ ನೀಡಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ರಾಹುಲ್, ನಿಮ್ಮ ನೋಟಿಸ್ಗೆ ಬದ್ಧನಾಗಿದ್ದು, ಸರ್ಕಾರಿ ಬಂಗಲೆ ಖಾಲಿ ಮಾಡುತ್ತೇನೆ. ಕಳೆದ ನಾಲ್ಕು ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿ, ನಾನು ಇಲ್ಲಿ ಅನೇಕ ಖುಷಿ ಕ್ಷಣಗಳನ್ನು ಕಳೆದಿದ್ದೇನೆ. ಜನರ ಆದೇಶಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.