ನವದೆಹಲಿ, ಮಾ 28 (DaijiworldNews/DB): ರಾಹುಲ್ ಗಾಂಧಿಯವರಿಗೆ ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸೂಚಿಸಿರುವುದು ಕ್ಷುಲ್ಲಕ ವ್ಯಕ್ತಿಗಳ ಕ್ಷುಲ್ಲಕ ರಾಜಕೀಯ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಕೇಂದ್ರ ಸರ್ಕಾರವು ಅಧಿಕೃತ ಸರ್ಕಾರಿ ಬಂಗಲೆಯನ್ನು ತೆರವು ಮಾಡುವಂತೆ ಹೇಳಿದೆ. ಆದರೆ ಇದೊಂದು ಕ್ಷುಲ್ಲಕ ರಾಜಕಾರಣ. ಕ್ಷುಲ್ಲಕ ವ್ಯಕ್ತಿಗಳಷ್ಟೇ ಇಂತಹ ರಾಜಕೀಯ ಮಾಡುತ್ತಾರೆ ಎಂದು ಕಿಡಿ ಕಾರಿದರು.
ಇಂತಹ ನೀಚ ರಾಜಕಾರಣ ಮಾಡುವವರ ಆತ್ಮಸಾಕ್ಷಿ ರಜೆಯಲ್ಲಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಂಡ ಮರುದಿನ ಅವರು ವಾಸವಾಗಿದ್ದ ಅಧಿಕೃತ ಸರ್ಕಾರಿ ಬಂಗಲೆಯನ್ನು ತೊರೆಯುವಂತೆ ಸರ್ಕಾರ ಸೂಚಿಸಿತ್ತು. 2005ರಿಂದ ತುಘಲಕ್ ಲೇನ್ ಬಂಗಲೆಯಲ್ಲಿ, ಝಡ್ ಪ್ಲಸ್ ಭದ್ರತೆಯೊಂದಿಗೆ ವಾಸಿಸುತ್ತಿರುವ ರಾಹುಲ್ ಗಾಂಧಿಯವರು ಮನೆ ಖಾಲಿ ಮಾಡಬೇಕೆಂದು ಲೋಕಸಭೆಯ ವಸತಿ ಸಮಿತಿಯುವ ಪತ್ರ ಬರೆದಿತ್ತು.