ಬೆಂಗಳೂರು, ಮಾ 28 (DaijiworldNews/DB): ಮೋದಿಯವರಿಗೆ ರಾಹುಲ್ ಗಾಂಧಿ ಸವಾಲೇ ಅಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಅವರು ಹೇಳಿದ್ದು ನಿಜ. ಮಾನವೀಯ ಅಂತಃಕರಣವಿರುವ ರಾಹುಲ್, ಸರ್ವಾಧಿಕಾರಿ ಮನಃಸ್ಥಿತಿಯ ಮೋದಿಯವರಿಗೆ ಸವಾಲಾಗಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಿನ್ನೆ ರಾಜ್ಯಕ್ಕೆ ಬಂದಿದ್ದ ಸಚಿವೆ ಸ್ಮೃತಿ ಇರಾನಿ ಅವರು ಮೋದಿಯವರಿಗೆ ರಾಹುಲ್ ಗಾಂಧಿ ಅವರು ಸವಾಲೇ ಅಲ್ಲ ಎಂದಿರುವುದು ಸತ್ಯ ಎಂದರು.
ಮಾನವೀಯ ಅಂತಃಕರಣವಿರುವ ರಾಹುಲ್, ಸರ್ವಾಧಿಕಾರಿ ಮನಃಸ್ಥಿತಿಯ ಮೋದಿಯವರಿಗೆ ಸವಲಾಗಲು ಸಾಧ್ಯವೇ? ಮೋದಿಯವರಿಗೆ ಸವಾಲಾಗಬೇಕೆಂದರೆ, ಹಿಟ್ಲರ್-ಮುಸಲೋನಿ ನಂತಹ ಮನಃಸ್ಥಿತಿಯವರಿಗೆ ಮಾತ್ರ ಸಾಧ್ಯ ಎಂದು ದಿನೇಶ್ ಗುಂಡೂರಾವ್ ಲೇವಡಿ ಮಾಡದರು.
ಮೇಡಂ ಇರಾನಿಯವರೆ, ಮೋದಿ ಮತ್ತು ರಾಹುಲ್ ನಡುವಿನ ಹೋರಾಟ ಸವಾಲಿನದ್ದಲ್ಲ. ಇದು ಧರ್ಮ-ಅಧರ್ಮದ ನಡುವಿನ ಹೋರಾಟ. ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟ. ರಾಹುಲ್ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ. ನಿಮ್ಮ ಮೋದಿಯವರು ಸತ್ಯವಂತರಾಗಿದ್ದರೆ, ಅದಾನಿ ಕುರಿತು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ ಎಂದು ಸವಾಲೆಸೆದಿದ್ದಾರೆ.
ಇರಾನಿಯವರೆ, ಮೋದಿಯವರ ಸುಳ್ಳಿನ ಮುಖವಾಡವನ್ನು ಕಳಚುತ್ತಿರುವ ರಾಹುಲ್ ಬಗ್ಗೆ ನಿಮಗೆ ಹೆದರಿಕೆಯಿರುವುದು ಸಹಜ. ಹೇಡಿತನ ಹೆದರಿಕೆಯ ಅತಿಮುಖ್ಯ ಲಕ್ಷಣ. ಆ ಹೇಡಿತನದಿಂದಲೇ ರಾಹುಲ್ರವರ ಸಂಸದ ಸ್ಥಾನ ಕಿತ್ತುಕೊಂಡಿದ್ದೀರಾ, ಮನೆ ಕಸಿದುಕೊಂಡಿದ್ದೀರಾ. ಆದರೆ ಜನರು ತಮ್ಮ ಮನಸ್ಸಿನಲ್ಲಿ ರಾಹುಲ್ ಮೇಲಿಟ್ಟಿರುವ ಪ್ರೀತಿ ಕಸಿದುಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.