ಕೋಲಾರ, ಮಾ 28 (DaijiworldNews/MS): ಏಪ್ರಿಲ್ 5ಕ್ಕೆ ಕೋಲಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬರಲಿದ್ದು, ಈ ಬಾರಿಯ ಭೇಟಿ ಬಹಳ ಮಹತ್ವ ಪಡೆದಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ,"ರಾಹುಲ್ ಅವರ ಸಂಸತ್ ಸದಸ್ಯತ್ವ ಅನರ್ಹತೆ ಬಳಿಕ ಮೊದಲ ಬಹಿರಂಗ ಸಮಾವೇಶ ಇದಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ರಾಹುಲ್ ಇಲ್ಲಿಂದಲೇ ಉತ್ತರ ನೀಡಲಿದ್ದಾರೆ. 1 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲಾಗುವುದು"ಎಂದು ಹೇಳಿದ್ದಾರೆ.
ಏನಾಗಿತ್ತು?
ಸಾರ್ವತ್ರಿಕ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಅಭ್ಯರ್ಥಿಯಾಗಿದ್ದ ಕೆ ಎಚ್ ಮುನಿಯಪ್ಪ ಅವರ ಪರವಾಗಿ 2019ರ ಏಪ್ರಿಲ್ 19ರಂದು ಕೋಲಾರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಅಬ್ಬರದ ಪ್ರಚಾರ ನಡೆಸಿದ್ದರು. ಆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಬ್ಯಾಂಕ್ಗಳಿಗೆ ವಂಚಿಸಿ ದೇಶ ತೊರೆದಿದ್ದ ನೀರವ್ ಮೋದಿ, ಲಲಿತ್ ಮೋದಿ ಅವರೊಂದಿಗೆ ನರೇಂದ್ರ ಮೋದಿ ಅವರ ಹೆಸರು ತಳುಕಿ ಹಾಕಿ ರಾಹುಲ್ ಭಾಷಣ ಮಾಡಿದ್ದರು. ಮೋದಿ' ಉಪನಾಮ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ರಾಹುಲ್ ದೂಷಿಸಿದ್ದಾರೆ ಎಂದು ಗುಜರಾತ್ನ ಬಿಜೆಪಿಯ ಸೂರತ್ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಾದ ಅಲಿಸಿದ ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು.
ಒಟ್ಟಾರೆ ರಾಹುಲ್ ಗಾಂಧಿ ಅನರ್ಹಗೊಳಿಸಿದ್ದನ್ನೇ ಪ್ರಚಾರದ ಪ್ರಭಲ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದ್ದು ಕೋಲಾರದಿಂದಲೇ ಅನರ್ಹತೆ ಮತ್ತು ಶಿಕ್ಷೆಯ ಬಗ್ಗೆ ಉತ್ತರ ನೀಡಲಿದ್ದಾರೆ. ಅದಕ್ಕಾಗಿ ಈಗನಿಂದಲೇ ಪೂರ್ವಸಿದ್ಧತೆ ನಡೆಸಲು ಚರ್ಚೆ ನಡೆಸುತ್ತಿದ್ದು, ಬಿಜೆಪಿ ಸರ್ಕಾರಕ್ಕೆ ಉತ್ತರ ನೀಡಲು ತಯಾರಿ ನಡೆಸುತ್ತಿದೆ. ಈಗಾಗಲೇ ಕಾಂಗ್ರೆಸ್ ದೇಶಾದ್ಯಂತ ಕೇಂದ್ರ ಬಿಜೆಪಿ ಸರ್ಕಾರದ ಪ್ರತಿಭಟನೆ ಮಾಡುತ್ತಿದೆ.