ಬೆಂಗಳೂರು, ಮಾ 28 (DaijiworldNews/DB): ಬಿಜೆಪಿಯ ಆಂತರಿಕ ಕುತಂತ್ರದಿಂದಾಗಿ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ರಾಜಕೀಯವಾಗಿ ಅವನ್ನು ಮುಗಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರಿ ಪ್ರತಿನಿಧಿಯಾಗಿ ಭಾಗಿಯಾಗದಿದ್ದರೂ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಮೊದಲು ಯಡಿಯೂರಪ್ಪರನ್ನು ಸೈಡ್ಲೈನ್ ಮಾಡಿದ್ದರು. ಇದೀಗ ಅಮಿತ್ ಶಾ ಅವರ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ಮತ್ತೆ ಅವರನ್ನು ಮುನ್ನೆಲೆಗೆ ತಂದಿದ್ದಾರೆ. ಆದರೆ ಇನ್ನೊಂದೆಡೆ ಅವರ ಮನೆಗೆ ಕಲ್ಲು ಹೊಡೆಯುತ್ತಾರೆ. ಇದಕ್ಕೆ ಬಿಜೆಪಿಯ ಆಂತರಿಕ ಕುತಂತ್ರವೇ ಕಾರಣ ಎಂದು ಆಪಾದಿಸಿದರು.
ರಾಜಕೀಯವಾಗಿಯೂ, ಪಕ್ಷದಲ್ಲಿಯೂ ಯಡಿಯೂರಪ್ಪರನ್ನು ಮುಗಿಸಬೇಕೆಂಬುದು ಬಿಜೆಪಿ ನಾಯಕರ ತಂತ್ರ. ಅದರ ಭಾಗವಾಗಿ ಮನೆಗೆ ಕಲ್ಲು ತೂರಾಟ ನಡೆದಿದೆ. ಪಕ್ಷದೊಳಗಿನ ಸಂಘರ್ಷಕ್ಕೆ ಇದೊಂದು ನಿದರ್ಶನವಾಗಿದೆ ಎಂದು ಕಿಡಿ ಕಾರಿದರು.
ಇನ್ನು ರಾಷ್ಟ್ರೀಯ ನಾಯಕರು ಬಂದು ಇವರನ್ನೆಲ್ಲಾ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಡಿವಾಣ ಹಾಕಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಫೋನ್ಗಳನ್ನೂ ಕಿತ್ತುಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಮೀಸಲಾತಿಯ ನಿರ್ಧಾರ ವಿರುದ್ಧ ಸಿಡಿದೆದ್ದ ಕೆಲವರು ಶಿಕಾರಿಪುರದಲ್ಲಿರುವ ಯಡಿಯೂರಪ್ಪ ನಿವಾಸ ಹಾಗೂ ಮನೆ ಮುಂಭಾಗ ಇದ್ದ ಕಚೇರಿ ಮೇಲೆ ಸೋಮವಾರ ಕಲ್ಲು ತೂರಾಟ ನಡೆಸಿದ್ದರು. ಇನ್ನು ಬಿಎಸ್ವೈ ನಿವಾಸದ ಅಕ್ಕಪಕ್ಕದ ಮನೆಗಳಿಗೆ ಸಂಬಂಧಿಸಿದ ವಾಹನಗಳಿಗೂ ಹಾನಿ ಮಾಡಿದ್ದರು.