ಮದ್ಯಪ್ರದೇಶ, ಮಾ 28 (DaijiworldNews/MS): ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ತರಲಾದ 8 ಚೀತಾಗಳ ಪೈಕಿ ಒಂದು ಹೆಣ್ಣು ಚೀತಾ ಸೋಮವಾರ ಮೃತಪಟ್ಟಿದೆ. ಹೆಣ್ಣು ಚೀತಾ 'ಸಾಶಾ'ಗೆ ಕಳೆದ ಜನವರಿಯಲ್ಲಿ ಮೂತ್ರಪಿಂಡದ ಸೋಂಕು ತಗುಲಿದ್ದುಅಂದಿನಿಂದಲೂ ಚೀತಾವನ್ನು ತೀವ್ರ ವೈದ್ಯಕೀಯ ನಿಗಾದಲ್ಲಿ ಇಡಲಾಗಿತ್ತು.ಆದರೆ 'ಸಾಶಾ' ಸೋಮವಾರ ಕೊನೆಯುಸಿರೆಳೆದಿದೆ.
ಸಾಶಾ ಆಯಾಸ ಮತ್ತು ದೌರ್ಬಲ್ಯದ ಲಕ್ಷಣವಿದ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅದಕ್ಕೆ ನಿರ್ಜಲೀಕರಣವಿದ್ದು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿತ್ತು ಎಂದು ತಿಳಿದು ಬಂದಿತ್ತು.ಹೀಗಾಗಿ ರಕ್ತ ಪರೀಕ್ಷೆ ನಡೆಸಿದಾಗ ಅದರ ಕ್ರಿಯೇಟಿನೈನ್ ಮಟ್ಟವು ತುಂಬಾ ಹೆಚ್ಚಾಗಿದ್ದು ಇದು ಮೂತ್ರಪಿಂಡದಲ್ಲಿ ಸೋಂಕನ್ನು ಸೂಚಿಸಿದೆ.
ಉದ್ಯಾನದಲ್ಲಿರುವ ಇತರ ಚೀತಾಗಳು ಆರೋಗ್ಯವಾಗಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಕುನೋದಲ್ಲಿ ಬಿಡುಗಡೆ ಮಾಡಿದ ಐದು ವರ್ಷದ ಎರಡು ಹೆಣ್ಣು ಚೀತಾಗಳಲ್ಲಿ ಸಾಶಾ ಕೂಡಾ ಒಂದಾಗಿದೆ.
ಫೆಬ್ರವರಿ 18ರಂದು ದಕ್ಷಿಣ ಆಫ್ರಿಕಾದಿಂದಲೂ 12 ಚೀತಾಗಳನ್ನು ತಂದು ಕುನೊ ಅಭಯಾರಣ್ಯಕ್ಕೆ ಬಿಡಲಾಗಿದೆ. ಈ ಪೈಕಿ 7 ಗಂಡು ಹಾಗೂ ಐದು ಹೆಣ್ಣು ಚೀತಾಗಳಿವೆ. ಕುನೊ ನ್ಯಾಷನಲ್ ಪಾರ್ಕ್ನಲ್ಲಿ ಸದ್ಯ ಒಟ್ಟು 19 ಚೀತಾಗಳಿವೆ. ಕಳೆದ ವಾರ ಎಲ್ಟನ್ ಮತ್ತು ಫ್ರೆಡ್ಡಿ ಎಂಬ ಚೀತಾಗಳನ್ನು ಮಧ್ಯಪ್ರದೇಶದಲ್ಲಿ ಕಾಡಿಗೆ ಬಿಡಲಾಗಿದೆ