ಬೆಂಗಳೂರು, ಮಾ 28 (DaijiworldNews/MS): ಎಲ್ಲರಿಗೂ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಲಿಂಕ್ ಮಾಡುವುದನ್ನು ಭಾರತ ಸರ್ಕಾರವು ಈಗ ಕಡ್ಡಾಯಗೊಳಿಸಿದೆ. ಈ ವರ್ಷದ ಮಾರ್ಚ್ 31ರ ಒಳಗಾಗಿ ನೀವು ಈ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಲು ಅವಕಾಶ ನೀಡಲಾಗಿದ್ದು, ಈ ಸಮಯದ ಒಳಗಾಗಿ ನೀವು ಈ ಕೆಲಸವನ್ನು ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಹೀಗಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡೋಕೆ ಕೆಲವೇ ದಿನಗಳು ಬಾಕಿಯಿವೆ. ಈ ಎರಡು ಕಾರ್ಡ್ ಗಳನ್ನು ಲಿಂಕ್ ಮಾಡೋಕೆ ಜನರು ಸೈಬರ್ ಸೆಂಟರ್ಗಳತ್ತ ಧಾವಿಸುತ್ತಿದ್ದಾರೆ. ಆದರೆ, ಇದರಲ್ಲೂ ಗೋಲ್ ಮಾಲ್ ನಡೆಯುತ್ತಿದೆ.
ಆದಾಯ ತೆರಿಗೆ ವೆಬ್ಸೈಟ್ ಬದಲಾಗಿ, ಬೇರೆ ಬೇರೆ ವೆಬ್ ಸೈಟ್ಗಳಲ್ಲಿ ನಕಲಿಯಾಗಿ ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿ ಜನರಿಂದ ಹಣ ದೋಚಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕೆಲ ಸೈಬರ್ ಸೆಂಟರ್ಗಳ ಮಾಲೀಕರು, ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ ಬದಲಾಗಿ, ಬೇರೆ ಬೇರೆ ವೆಬ್ ಸೈಟ್ ಗಳಲ್ಲಿ ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿ ಜನರಿಂದ ಹಣ ಹೊಡೆಯುತ್ತಿದ್ದಾರೆ. ಒಂದು ಸಾವಿರ ರೂಪಾಯಿ ದಂಡದ ಹಣದ ಜತೆ ಇದರ ಪ್ರೋಸೆಸಿಂಗ್ ಫೀಜ್ ಎಂದು ನೆಪ ಹೇಳಿ ಕೆಲವೆಡೆ 500 ರೂಪಾಯಿವರೆಗೆ ಹಣ ಪಡೆದುಕೊಳ್ಳಲಾಗುತ್ತಿದೆ ಆದ್ದರಿಂದ ಜನರು ಎಚ್ಚರವಾಗಿರುವುದು ಒಳಿತು.