ಬೆಂಗಳೂರು, ಮಾ 28 (DaijiworldNews/DB): ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ನಿರ್ಧರಿಸಿದೆ. ಮಂಗಳವಾರವೇ ಕೇಂದ್ರಕ್ಕೆ ಈ ಸಂಬಂಧ ವರದಿ ರವಾನೆಯಾಗಲಿದ್ದು, ವರಿಷ್ಠರ ಆದೇಶ ಬಂದ ತತ್ಕ್ಷಣ ಕ್ರಮಕ್ಕೆ ಮುಂದಾಗಲು ಬಿಜೆಪಿ ರಾಜ್ಯ ಘಟಕ ಮುಂದಾಗಿದೆ.
ಜಾಮೀನು ಕೋರಿ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿ ತಿರಸ್ಕೃತಗೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಡಾಳ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಇಂದು ಮಾಡಾಳ್ ಪ್ರಕರಣ ಸಂಬಂಧ ಹೈಕಮಾಂಡ್ಗೆ ವರದಿ ನೀಡಲು ಬಿಜೆಪಿ ನಿರ್ಧರಿಸಿದೆ. ಅದಾದ ಬಳಿಕ ಶಿಸ್ತು ಕ್ರಮಕ್ಕೆ ವರಿಷ್ಠರು ಆದೇಶಿಸಿದ ಬೆನ್ನಲ್ಲೇ ಅದನ್ನು ಕಾರ್ಯರೂಪಕ್ಕೆ ತರುವುದು ಬಿಜೆಪಿ ಉದ್ದೇಶ.
ಮಾಡಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಮಾಡಾಳ್ ಕುಟುಂಬದ ಯಾರಿಗೂ ಚೆನ್ನಗಿರಿಯಿಂದ ಟಿಕೆಟ್ ನೀಡದೇ ಇರಲು ಬಿಜೆಪಿ ನಿರ್ಧಾರಕ ಕೈಗೊಳ್ಳಬಹುದು ಎಂದೂ ಹೇಳಲಾಗುತ್ತಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ನಿಯಮಿತದ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಬಂಧನ ನಡೆದಿತ್ತು.
ಕೆಎಸ್ಡಿಎಲ್ಗೆ ರಾಸಾಯನಿಕ ಪೂರೈಕೆ ಮಾಡಲು 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅವರ ಮೇಲಿದೆ. ಈ ಮೊತ್ತದ ಪೈಕಿ ಅವರ ಪುತ್ರ ಪ್ರಶಾಂತ್ 40 ಲಕ್ಷ ರೂ. ಲಂಚವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಬಳಿಕ ಮಾಡಾಳ ಹಾಗೂ ಅವರ ಪುತ್ರನಿಗೆ ಸೇರಿದ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು 8.23 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದರು.