ಬೆಂಗಳೂರು, ಮಾ 27 (DaijiworldNews/SM): ಲಂಚ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೊನೆಗೂ ಲೋಕಾಯುಕ್ತ ಪೊಲೀಸರ ಕೈವಶವಾಗಿದ್ದಾನೆ. ಸೋಮವಾರ ಸಂಜೆ ವೇಳೆ ವಿರೀಪಾಕ್ಷಪ್ಪನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್(Karnataka High Court) ಏಕಸದಸ್ಯ ಪೀಠ ವಜಾಗೊಳಿಸಿತ್ತು. ಅರ್ಜಿ ವಜಾಗೊಂಡ ವೇಳೆ ಚನ್ನಗಿರಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಕ್ಷಣಮಾತ್ರದಲ್ಲಿ ಅಲ್ಲಿಂದ ತೆರಳಿ ನಾಪತ್ತೆಯಾಗಿದ್ದರು. ಅವರನ್ನು ಬಂಧಿಸುವುದಕ್ಕಾಗಿ ಲೋಕಾಯುಕ್ತ ಪೊಲೀಸರ ತಂಡ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಅಷ್ಟರಲ್ಲೇ ಅವರು ಬೆಂಗಳೂರಿಗೆ ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗಿತ್ತು. ಇದೀಗ ಕೊನೆಗೂ ಅವರನ್ನು ಬಂಧಿಸುವಲ್ಲಿ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿದ್ದಾರೆ. ಚನ್ನಗಿರಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.
ಬೆಂಗಳೂರಿಗೆ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತ್ಸಂದ್ರ ಟೋಲ್ ಲೋಕಾಯುಕ್ತ ಪೊಲೀಸರು ಬಂಧಿಸಿದರು. ನಂತರ ಬೆಂಗಳೂರಿನತ್ತ ಕರೆದೊಯ್ದರು. ಚನ್ನಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಅಲ್ಲಿರುವಾಗಲೇ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸುವುದು ತಿಳಿದುಬಂದಿತ್ತು. ತಕ್ಷಣವೇ ಅವರು ಅಲ್ಲಿಂದ ತೆರಳಿದ್ದರು. ಶಾಸಕರು ನಾಪತ್ತೆಯಾಗಿದ್ದಾರೆ ಎಂದೇ ಮೊದಲಿಗೆ ಹೇಳಲಾಗಿತ್ತು. ನಂತರ ಅವರು ಬೆಂಗಳೂರಿನತ್ತ ತೆರಳಿರುವುದಾಗಿ ಮೂಲಗಳು ತಿಳಿಸಿದ್ದವು.