ನವದೆಹಲಿ, ಮಾ 27 (DaijiworldNews/MS): ಕಾಂಗ್ರೆಸ್ ಮುಖಂಡ, ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟಂತೆ ಗುಜರಾತ್ ನ ಸೂರತ್ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ನೀಡಿ ವಿಧಿಸಿದ್ದ ಬೆನ್ನಿಗೆ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿದೆ. ಇದೊಂದೆ ಅಲ್ಲ ರಾಹುಲ್ ಗಾಂಧಿ ವಿರುದ್ಧ ದೇಶದ ಹಲವೆಡೆ 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ವ್ಯಾಜ್ಯಗಳು ಬಾಕಿ ಇವೆ. ವಿಶೇಷ ಅಂದ್ರೆ ರಾಹುಲ್ ಮಾತ್ರ ಯಾರ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸಿಲ್ಲ.!
ರಾಹುಲ್ ಅವರನ್ನು ಅವರ ವಿರೋಧಿಗಳು ’ಪಪ್ಪು’ ಎಂದು ಜರಿದರೂ, ಅವರ ಕುಟುಂಬವನ್ನು ನಿಂದಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಅವರೂ ಯಾರ ವಿರುದ್ದವೂ ಪ್ರಕರಣವನ್ನೂ ದಾಖಲಿಸಲಿಲ್ಲ.
ರಾಹುಲ್ ಗಾಂಧಿ 2019ರಲ್ಲಿ ಕೋಲಾರದಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ಸಭೆಯ ವೇಳೆ ಮೋದಿ ಉಪನಾಮದ ಕುರಿತು ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ? ಎಂದು ಪ್ರಶ್ನಿಸಿದ್ದರು. ಗುಜರಾತ್ನ ಬಿಜೆಪಿಯ ಸೂರತ್ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದಲ್ಲದೇ ರಾಹುಲ್ ಗಾಂಧಿ ಅವರ ವಿರುದ್ದ 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ಕೇಸ್ ಇದ್ದು ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಬಿಂಬಿತವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಾಗೂ ಸಾವರ್ಕರ್ ವಿರುದ್ಧ ನೀಡಿದ್ದ ಹೇಳಿಕೆಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ.
ಒಟ್ಟಾರೆ ಅದೇನೆ ಇರಲಿ ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ವೇಗ ಮತ್ತು ರೀತಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬಿಕ್ಕಟ್ಟನ್ನು ಕಾಂಗ್ರೆಸ್ ಅವಕಾಶವನ್ನಾಗಿ ಪರಿವರ್ತಿಸಬಲ್ಲದೇ? ಚುನಾವಣೆಯ ಹೊಸ್ತಿಲಲ್ಲಿ ಇರುವ ಕರ್ನಾಟಕಕ್ಕೆ ಇದರಿಂದ ಲಾಭವಾಗಬಹುದೇ ಎಂಬುವುದು ಸದ್ಯದ ಪ್ರಶ್ನೆಯಾಗಿದೆ.