ಕೊಚ್ಚಿ, ಮಾ. 24 (DaijiworldNews/SM): ರಸ್ತೆ ತಪಾಸಣೆ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೊಬ್ಬರು ಹೆಲ್ಮೆಟ್ನಿಂದ ಹೊಡೆದಿದ್ದರಿಂದ ಇಬ್ಬರು ಮಕ್ಕಳ ತಂದೆಯೊಬ್ಬರು ಶನಿವಾರ ರಾತ್ರಿ ತ್ರಿಪುಣಿತುರಾ ಹಿಲ್ ಪ್ಯಾಲೇಸ್ ಠಾಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದು ಕೇರಳ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಮೃತ ವ್ಯಕ್ತಿಯನ್ನು ಇರುಪನಂ ಮೂಲದ ಮನೋಹರನ್ ಎಂದು ಗುರುತಿಸಲಾಗಿದೆ.
ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದ ಒಂದು ಗಂಟೆಯೊಳಗೆ ಎರ್ನಾಕುಲಂ ಮೆಡಿಕಲ್ ಟ್ರಸ್ಟ್ನಲ್ಲಿ ಮೃತಪಟ್ಟಿರುವುದಾಗಿ ಪ್ರಕಟಿಸಲಾಗಿದೆ. ಸಣ್ಣ ಬಿಡಿ ಭಾಗಗಳ ಅಂಗಡಿ ನಡೆಸುತ್ತಿದ್ದ ಮನೋಹರನ್ ಕುಡಿದು ಅಜಾಗರೂಕತೆಯಿಂದ ವಾಹನ ಚಲಾಯಿಸದಿದ್ದರೂ ಅವರನ್ನು ಠಾಣೆಗೆ ಎಳೆದೊಯ್ಯಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಪಾಸಣೆಯ ವೇಳೆ ಮನೋಹರನ್ ಅವರ ಮುಖಕ್ಕೆ ಕಪಾಳಮೋಕ್ಷ ಮಾಡಿದ ಸಬ್ ಇನ್ಸ್ಪೆಕ್ಟರ್ ಜಿಮ್ಮಿ ಜೋಸ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಅವರ ಅನುಚಿತ ವರ್ತನೆ ಒಪ್ಪತಕ್ಕದ್ದಲ್ಲ ಎಂದಿರುವ ಕೊಚ್ಚಿ ನಗರ ಪೊಲೀಸ್ ಕಮಿಷನರ್ ಕೆ ಸೇತು ರಾಮನ್ , ಮನೋಹರನ್ ಕುಡಿದು ವಾಹನ ಚಲಾಯಿಸಿದ್ದು ಕಂಡುಬಂದಿಲ್ಲ. ಘಟನೆಯ ತನಿಖೆಯನ್ನು ನಗರ ಅಪರಾಧ ವಿಭಾಗದ ಡಿವೈಎಸ್ಪಿಗೆ ವಹಿಸಲಾಗಿದೆ. ಸಾವಿನ ಹಿಂದಿರುವ ನಿಜವಾದ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬರಲಿದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.