ವಿಜಯಪುರ, ಮಾ 26 (DaijiworldNews/DB): ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಬಿಜೆಪಿಯ ಐತಿಹಾಸಿಕ ನಿರ್ಧಾರಗಳು ಕಾಂಗ್ರೆಸ್ಸಿಗರಿಗೆ ಹತಾಶೆ ಉಂಟು ಮಾಡುತ್ತಿರುವ ಕಾರಣ ಮೀಸಲಾತಿ ವಿಚಾರಗಳಲ್ಲಿ ಸ್ವಾಮೀಜಿಗಳನ್ನು ಎಳೆದು ತರುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಘೋಷಣೆ ವಿಚಾರದಲ್ಲಿ ಸಮುದಾಯದ ಶ್ರೀಗಳಿಗೆ ಒತ್ತಡ ಹಾಕಲಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಮ್ಮನ್ನು ಟೀಕಿಸಲು ಕಾಂಗ್ರೆಸ್ನವರಿಗೆ ಬೇರೆ ವಿಷಯ ಸಿಗುತ್ತಿಲ್ಲ. ಅದಕ್ಕೆ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೆಸ್ನಂತೆ ಗೂಂಡಾ ನಾಯಕರಾರೂ ಬಿಜೆಪಿಯಲ್ಲಿಲ್ಲ. ಅವರಂತ ಉಪಧ್ಯಾಪಿತನ ಸಂಸ್ಕೃತಿ ನಮ್ಮದಲ್ಲ. ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಈ ರೀತಿಯ ಅನಗತ್ಯ ಟೀಕೆಯಲ್ಲಿ ತೊಡಗಿದ್ದಾರೆ ಎಂದರು.