ತುಮಕೂರು, ಮಾ 26 (DaijiworldNews/DB): ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ಬಳಿಕ ಅಧಿಕೃತವಾಗಿ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ. ಇವರ ರಾಜೀನಾಮೆಯೊಂದಿಗೆ ಗುಬ್ಬಿ ಜೆಡಿಎಸ್ನ ಹಲವರು ರಾಜೀನಾಮೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡ ಕಾರಣ ಈಗಾಗಲೇ ಎಸ್.ಆರ್. ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಾಳೆ ಅಂದರೆ ಮಾರ್ಚ್ 27ರಂದು ಅವರು ಅಧಿಕೃತವಾಗಿ ಜೆಡಿಎಸ್ ತೊರೆಯಲಿದ್ದಾರೆ. ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನು ಶ್ರೀನಿವಾಸ್ ರಾಜೀನಾಮೆ ಬೆನ್ನಲ್ಲೇ ಗುಬ್ಬಿ ಜೆಡಿಎಸ್ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿ.ಹೊಸಹಳ್ಳಿ ಗ್ರಾಮದಲ್ಲಿ ಹಲವರು ರಾಜೀನಾಮೆ ನೀಡಿದ್ದಾರೆ. 300ಕ್ಕೂ ಅಧಿಕ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಬೂತ್ ಕಮಿಟಿ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಚೇರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇನ್ನೂ ಹಲವರು ಜೆಡಿಎಸ್ ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ರಾಜೀನಾಮೆ ವಿಚಾರವಾಗಿ ಗುಬ್ಬಿ ತಾಲೂಕಿನಲ್ಲಿ ಮಾತನಾಡಿರುವ ಶ್ರೀನಿವಾಸ್, ಶಾಸಕ ಸ್ಥಾನಕ್ಕೆ ಇಂದೇ ರಾಜೀನಾಮೆ ಸಲ್ಲಿಸಬೇಕಿತ್ತಾದರೂ ಸ್ಪೀಕರ್ ಅಲಭ್ಯರಾದ ಕಾರಣ ಸೋಮವಾರ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್ನಿಂದ ಎಸ್.ಆರ್. ಶ್ರೀನಿವಾಸ್ಗೆ ಟಿಕೆಟ್ ಪಕ್ಕಾ ಆಗಿದೆ ಎನ್ನಲಾಗಿದೆ. ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಗುಬ್ಬಿ ಕ್ಷೇತ್ರದ ಟಿಕೆಟ್ ಪ್ರಕಟಿಸಿಲ್ಲ. ಆದರೆ ಇದೇ ವೇಳೆ ಶ್ರೀನಿವಾಸ್ಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ನ ಗುಬ್ಬಿ ತಾಲೂಕಿನ ಕಾಂಗ್ರೆಸ್ ಘಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅವರಿಗೆ ಟಿಕೆಟ್ ನೀಡಿದರೆ ಬಂಡಾಯದ ಎಚ್ಚರಿಕೆಯನ್ನೂ ನಾಯಕರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರದಲ್ಲಿ ಪ್ರಸನ್ನಕುಮಾರ್ ಹಾಗೂ ಹೊನ್ನಗಿರಿ ಗೌಡ ಅವರು ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.